ಭದ್ರಾವತಿ : ಕುಮರಿ ನಾರಾಯಣಪುರ ಗ್ರಾಮದ ಚೌಡಮ್ಮ ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಇಬ್ಬರನ್ನು ಸೋಮವಾರ ಬಂಧಿಸಲಾಗಿದೆ.
ಭದ್ರಾವತಿಯ ಹೊಸಮನೆ ನಿವಾಸಿ ವಸಂತರಾಜು ಅಲಿಯಾಸ್ ವಸಂತ(37), ಬೇಡರ ಹೊಸಳ್ಳಿಯ ಶ್ವೇತಾ ಅಲಿಯಾಸ್ ಆಸ್ಮಾ(32) ಬಂಧಿತರು.
ಚೌಡಮ್ಮ ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದು ಒಳಗಡೆ ಇದ್ದ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಅಂದಾಜು ₹20,000 ರಿಂದ ₹30,000 ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪಿಐ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯ ಹಿನ್ನಲೆ
ಜೂನ್ 13ರಂದು ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ನಾಗರಾಜ್ ಎಂ,ಆದರ್ಶ್ ಜಿ ,ಉದಯ್ ಕುಮಾರ್ ಹೆಚ್ ಕೆ ಜಂಕ್ಷನ್ ಬಳಿ ವಿಶೇಷ ಗಸ್ತಿನಲ್ಲಿದ್ದಾಗ ವಸಂತ್ ಎಂಬುವವನು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದದನ್ನು ಕಂಡು ವಶಕ್ಕೆ ಪಡೆದು ಪಿಐ ಮುಂದೆ ಹಾಜರು ಪಡಿಸಿದ್ದಾರೆ.ನಂತರ ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಬಾಯಿ ಬಿಟ್ಟಿದ್ದಾನೆ.
₹10 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಸೀಜ್
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ 1 ದೇವಸ್ಥಾನ ಕಳ್ಳತನ ಪ್ರಕರಣ, ಪೇಪರ್ ಟೌನ್ ಪೊಲೀಸ್ ಠಾಣೆ ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆಯ 2 ಹಗಲು ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ₹10,25,000 ಒಟ್ಟು 220 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 132 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಮತ್ತು ₹5000/- ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯನ್ನು ಎಸ್ಪಿ ಲಕ್ಷ್ಮಿಪ್ರಸಾದ್ ,ಎಎಸ್ಪಿ ವಿಕ್ರಂ ಅಮ್ಟೆ ಮತ್ತು ಡಿವೈಎಸ್ಪಿ ಜಿತೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಭದ್ರಾವತಿ ಗ್ರಾಮಾಂತರ ಪಿಐ ಗುರುರಾಜ್,ಸಿಬ್ಬಂದಿಗಳಾದ ನಾಗರಾಜ್ ಎಂ,ಆದರ್ಶ್ ಜಿ,ಉದಯ್ ಕುಮಾರ್ ,ಶಿವಪ್ಪ ಎಂ ಹೆಚ್,ವಿನಾಯಕ ,ಜಗದೀಶ್ ,ಪ್ರಕಾಶ್ ಜಿ ಕೆ ,ಗಿರೀಶ್ ನಾಯ್ಕ್ ,ಮತ್ತು ಪ್ರಭು ಪಾಲ್ಗೊಂಡಿದ್ದರು.