Headlines

ಕುಡಿದ ಅಮಲಿನಲ್ಲಿ ವ್ಯಕ್ತಿಯ ಮೇಲೆ ಮಾರಾಣಂತಿಕ ಹಲ್ಲೆ ಮಾಡಿದ ಯುವಕರು : ಕುಡುಕರ ಹಾವಳಿಯಿಂದ ಬೆಚ್ಚಿ ಬೀಳುತ್ತಿರುವ ಜನತೆ!!!!! ರಿಪ್ಪನ್‌ಪೇಟೆಯ ಖಾಲಿ ಲೇಔಟ್ ಗಳೇ ಕುಡುಕರ ಸಾಮ್ರಾಜ್ಯ…!!!

ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಸಿದ್ದಪ್ಪನಗುಡಿಯಲ್ಲಿ ಮದ್ಯಪಾನ ಮಾಡುತ್ತಿದ್ದ ಯುವಕರಿಗೆ ಬುದ್ದಿ ಹೇಳಿದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಪಟ್ಟಣದ ಸಿದ್ದಪ್ಪನಗುಡಿ ಸಮೀಪದಲ್ಲಿ ಕೃಷಿಕರೊಬ್ಬರು ತನ್ನ ಜಮೀನಿನಲ್ಲಿ ಶುಂಠಿ ನೆಡುವ ಕಾರ್ಯದಲ್ಲಿದ್ದಾಗ ಅವರದೇ ಜಮೀನಿನಲ್ಲಿ ಶಿವಮೊಗ್ಗ ಮೂಲದ ಅಮಾನುಲ್ಲಾ ಮತ್ತು ಕಿರಣ್ ಎಂಬ ಯುವಕರು ಮದ್ಯಪಾನ ಮಾಡುತಿದ್ದರು.ಮದ್ಯಪಾನ ಮಾಡಿ ಬಾಟಲ್ ಜಮೀನಿನಲ್ಲಿ ಒಡೆಯಬೇಡಿ ಎಂದು ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಆ ಸಂಧರ್ಭದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯು ಕೂಗಿಕೊಂಡ ಹಿನ್ನಲೆಯಲ್ಲಿ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತಿದ್ದವರು ಬಂದು ಜಗಳ ಬಿಡಿಸಿದ್ದಾರೆ.ನಂತರ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳ ಮೇಲೆ ಐಪಿಸಿ 324,323,506 ಹಾಗೂ 308 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ‌.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.


ರಿಪ್ಪನ್ ಪೇಟೆಯ ಲೇಔಟ್ ಗಳ ಬಯಲು ಪ್ರದೇಶಗಳೇ ಕುಡುಕರ  ಸಾಮ್ರಾಜ್ಯ…!

ರಿಪ್ಪನ್‌ಪೇಟೆಯ ಮದ್ಯದ ಅಂಗಡಿಗಳಲ್ಲಿ ಬೇರೆ ಬೇರೆ ಊರುಗಳಿಂದ ಬಂದವರು ಹೆಂಡ ಪಡೆದುಕೊಂಡು ಪಟ್ಟಣದ ವಿವಿಧ ಭಾಗಗಳಲ್ಲಿ ನಿರ್ಮಾಣಗೊಂಡಿರುವ ಲೇಔಟ್ ಗಳ ಬಯಲು ಪ್ರದೇಶಗಳನ್ನು ಕುಡುಕರ ಸಾಮ್ರಾಜ್ಯವನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲೇ ಕುಡಿದು ಖಾಲಿ ಬಾಟಲಿಗಳನ್ನು  ಒಡೆದು, ರಣ ಕೇಕೆ ಹಾಕಿ ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಲಕ್ಷಾಂತರ ರೂ ಹಣ ಪಾವತಿಸಿ ಸೈಟ್ ಪಡೆದ ಮಾಲೀಕರುಗಳು ಇವರ ಅಬ್ಬರವನ್ನು ಬೆಚ್ಚುಗಣ್ಣಿನಿಂದ ನೋಡುತ್ತಾ ಹಿಡಿಶಾಪ ಹಾಕುತಿದ್ದಾರೆ.


ಲೇಔಟ್ ಗಳ ಅಕ್ಕಪಕ್ಕದಲ್ಲಿ  ವಾಸಿಸುತ್ತಿರುವ ನಿವಾಸಿಗಳು ಹಾಗೂ ಸುತ್ತಮುತ್ತಲಿನ ನಾಗರಿಕರು ಗಳು ಕುಡುಕರ ಹಾವಳಿಯಿಂದ ಬೆಚ್ಚಿಬೀಳುತ್ತಿದ್ದಾರೆ. ಸಾಗರ ರಸ್ತೆ, ಹೊಸನಗರ ರಸ್ತೆ, ತೀರ್ಥಹಳ್ಳಿ ರಸ್ತೆ ಹಾಗೂ ಶಿವಮೊಗ್ಗ ರಸ್ತೆಯಲ್ಲಿನ  ಲೇಔಟ್ ಗಳ  ಖಾಲಿ ನಿವೇಶನಗಳನ್ನು ಹಗಲು ಕುಡುಕರುಗಳು ಮತ್ತು ರಾತ್ರಿ ಕುಡುಕರುಗಳು ಬಾರ್ ಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ.


ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು  ಹಾಗೂ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೀಗೆ ಮುಂದುವರಿದರೆ ರಿಪ್ಪನ್ ಪೇಟೆ ಎಂಬ ಸುಸಂಸ್ಕೃತ ಪಟ್ಟಣವು ಹೊಸನಗರ ತಾಲೂಕಿನ ಕುಡುಕರ ರಾಜಧಾನಿಯಾಗಲಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *