ಗ್ರಾಮಗಳ ಜೀರ್ಣೋದ್ಧಾರಕ್ಕಾಗಿ ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳು ಬಿಡುಗಡೆ ಮಾಡಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಇಲ್ಲೊಂದು ಗ್ರಾಮ ಸುಮಾರು 70 ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಇಷ್ಟೆಲ್ಲಾ ಸಂಕಷ್ಟ ಅನುಭವಿಸುತ್ತಿರುವ ಈ ಕುಗ್ರಾಮದ ಜನರ ಅಳಲನ್ನು ಯಾರು ಕೇಳವರೇ ಇಲ್ಲ. ಅಷ್ಟಕ್ಕೂ ಈ ಗ್ರಾಮ ಇರುವದಾದ್ರು ಎಲ್ಲಿ? ಇಲ್ಲಿಯ ಜನರ ಪರಿಸ್ಥಿತಿ ಆದ್ರೂ ಹೇಗಿದೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ…
ಹೌದು, ನಾವಿಲ್ಲಿ ಹೇಳಲು ಹೊರಟಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದ ಬಗ್ಗೆ. ಸುಮಾರು 70 ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ಇಲ್ಲಿಯ ಕುಟುಂಬಗಳು ಇಂದಿಗೂ ಈ ಕುಗ್ರಾಮದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮಕ್ಕೆ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕ ಇಲ್ಲ ಸಾರಿಗೆ ವ್ಯವಸ್ಥೆ ಅಂತೂ ಮೊದಲೇ ಇಲ್ಲ. ಇಲ್ಲಿನ ಜನರು ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯ ಇದೆ. ಹಳ್ಳಕೊಳ್ಳವನ್ನು ದಾಟಿ ಸಂಚರಿಸಲು ಅವರೇ ನಿರ್ಮಾಣ ಮಾಡಿರುವ ಕಟ್ಟಿಗೆಯ ಸೇತುವೆಯನ್ನೇ ಅವಲಂಬಿಸಿದ್ದಾರೆ. ಇನ್ನು ಮಳೆಗಾಲ ಬಂತು ಅಂದರೇ ಅಲ್ಲಿಯ ಪರಿಸ್ಥಿತ ಹೇಳತೀರದು. ಇದೆಲ್ಲ ಒಂದು ಕಡೆಯಾದ್ರೇ ಗುಡ್ಡದಲ್ಲಿ ವಾಸಿಸುತ್ತಿರುವ ಇವರಿಗೆ ಕಾಡು ಪ್ರಾಣಿಗಳ ಕಾಟ ಕೂಡ ಹೆಚ್ಚಾಗಿದೆ. ದಿನಾ ರಾತ್ರಿಯಾಗತ್ತಿದ್ದಂತೆ ಬೇಗನೆ ಮನೆ ಸೇರಿಕೊಳ್ಳಲೆಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1ರಿಂದ 10 ನೇ ತರಗತಿವರೆಗೆ ಮಾತ್ರ ಇದ್ದು ಮುಂದಿನ ವಿದ್ಯಾಭ್ಯಾಸಕ್ಕೆ ಅವಕಾಶವೇ ಇಲ್ಲ.
ಇನ್ನು ವ್ಯಾಪಾರ ವಹಿವಾಟಿಗೆ ಪಟ್ಟಣಕ್ಕೆ ಬರಬೇಕೆಂದರೆ ಸುಮಾರು 20 ಕಿಮೀ ದೂರದಲ್ಲಿರುವ ರಿಪ್ಪನ್ ಪೇಟೆ ಪಟ್ಟಣಕ್ಕೆ ಬರಬೇಕು. ಕಾಡಿನ ಮಧ್ಯೆ ಕಾಲ್ನಡಿಗೆಯಲ್ಲೇ ಸುಮಾರು 10 ರಿಂದ12 ಕಿಮೀ ಸಂಚರಿಸಿದಾಗ ಅಲ್ಲಲ್ಲಿ ಯಾವುದೋ ವಾಹನ ಏರಿ ಪಟ್ಟಣ ಸೇರಬೇಕು.
ಬೆಳ್ಳೂರು ಗ್ರಾಮದ ಪ್ರಮುಖ ಸಮಸ್ಯೆಗಳು:
ದಿನೇ ದಿನೇ ಅಭಿವೃದ್ಧಿಯತ್ತ ಸಾಗುತ್ತಿರುವ ನಮ್ಮ ದೇಶದಲ್ಲಿ ಇನ್ನೂ ಇಂತಹ ಕೆಲವು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳು ಸಿಗದೇ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ….
ಕುಡಿಯುವ ನೀರಿನ ಸಮಸ್ಯೆ
ಕಳಸೆ ಗ್ರಾಮದ ನೇರಲಿಗೆ,ಗಂಧದ ಸರ,ತೊಗಳ್ಳಿ, ಬೆಳ್ಳೂರು ಗ್ರಾಮದ ಹೊರಬೈಲು, ದೊಂಬರಹಳ್ಳಿ ಮಾರನ ಗದ್ದೆ, ಬರುವೆ, ಬುಕ್ಕಿವರೆ ಗ್ರಾಮದ ಹೊಗರೆ, ಗಂಟಾಲಸರ, ಮಸ್ಕಾನಿ ಗ್ರಾಮದ ಹಿರೇಸಾನಿ, ವಾಟೆಸರ ಗುಬ್ಬಿಗಾ ಗ್ರಾಮದ ಗಾಮನಗದ್ದೆ ಗ್ರಾಮಗಳಲ್ಲಿ ಇಂದಿಗೂ ನೀರಿನ ಸಂಪರ್ಕವಿಲ್ಲ.
ಆಸ್ಪತ್ರೆ ಸಮಸ್ಯೆ:
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 7-8 ಕಿ.ಮೀ. ದೂರದಲ್ಲಿರುವ ರಿಪ್ಪನ್ ಪೇಟೆ ಗೆ ಬರಬೇಕು. ಇನ್ನೂ ಅನಾರೋಗ್ಯದ ಪರಿಸ್ಥಿತಿಯಲ್ಲಿ ವೈದ್ಯಕೀಯ ಚಿಕತ್ಸೆಗೆ ಅಂತೂ ಹೇಳತೀರದು ಹೆಚ್ಚು ಕಡಿಮೆಯಾದ್ರೆ ದಾರಿ ಮಧ್ಯೆದಲ್ಲಿ ಪ್ರಾಣ ಹೋಗುತ್ತೆ ಅಂತಾರೆ ಇಲ್ಲಿಯ ಸ್ಥಳೀಯರು.
ರಸ್ತೆಯ ಸಮಸ್ಯೆ:
ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 5 ಗ್ರಾಮದಲ್ಲಿ 15 ಕ್ಕೂ ಅಧಿಕ ಮಜರೆ ಹಳ್ಳಿಗಳಿವೆ. ಮತ್ತಿಕೊಪ್ಪ–ಹೊರಬೈಲ್, ಬುರುಡೆ ಮಕ್ಕಿ, ಕಾಳನಕೆರೆ , ಮಸ್ಕಾನಿ, ದೊಂಬೆಕೊಪ್ಪ, ಹಿರೇಸಾನಿ, ವಾಟೆಸರ, ಹಳ್ಳಿಗಳಲ್ಲಿ ಇಂದಿಗೂ ಹೆದ್ದಾರಿ ಎಂದರೆ ಮಣ್ಣಿನ ಹಾದಿಯೇ ಆಗಿದೆ.
ಮೂಲ ಸೌಕರ್ಯಗಳಲ್ಲಿ ಅತ್ಯಮೂಲ್ಯವಾದ ಡಾಂಬರು ರಸ್ತೆ ಈ ಗ್ರಾಮದ ಕನಸಾಗೇ ಉಳಿದಿದೆ. ಪ್ರತಿ ಮನೆಯ ಸಂಪರ್ಕ ಮಳೆಗಾಲದಲ್ಲಿ ಹರ ಸಾಹಸವಾಗಿದೆ.
ಹಕ್ಕುಪತ್ರಕ್ಕಾಗಿ ಹರಸಾಹಸ:
ನಾಡಿಗೆ ಬೆಳಕು ನೀಡುವ ಸಲುವಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ಹೊತ್ತಿನಲ್ಲಿ ತಮ್ಮ ಮನೆ ಮಠಗಳನ್ನು ತೊರೆದು ಊರು ಬಿಟ್ಟು ಬಂದು ಈ ಭಾಗದಲ್ಲಿ ನೆಲೆ ಕಂಡ ಶರಾವತಿ ಮುಳುಗಡೆ ಸಂತ್ರಸ್ತ ಬಹು ಸಂಖ್ಯಾತ ಈಡಿಗಾ ಸಮುದಾಯದ ಕುಟುಂಬಗಳು ಇಲ್ಲಿವೆ. ಜೀವನ ನಿರ್ವಹಣೆಗಾಗಿ ಬಗರ್ ಹುಕುಂ ಕೃಷಿ ಸಾಗುವಳಿ ಮತ್ತು ಕೂಲಿ ಕೆಲಸ ಇವರ ಕಾಯಕವಾಗಿದೆ. ಆದರೆ ಇಂದಿಗೂ ತಮ್ಮ ಜಮೀನಿನ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ.
ಅರಣ್ಯ ಇಲಾಖೆಯ ಕಾಯಿದೆಗಳಿಂದಾಗಿ ಭೂಮಿ ಹಕ್ಕು ಗಗನ ಕುಸುಮವಾಗಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಬಗರ್ ಹುಕುಂ ಪರ ಧ್ವನಿ ಎತ್ತುವ ,ಆಶ್ವಾಸನೆ ಕೊಡುವ ಜನಪ್ರತಿನಿಧಿಗಳು ಚುನಾವಣೆ ನಂತರ ಇತ್ತ ಮುಖ ಮಾಡುತ್ತಿಲ್ಲ
ಶಾಲೆಗಳ ಸಮಸ್ಯೆ:
ಈ ಭಾಗದ ಕಳಸೆ, ಗುಬ್ಬಿಗಾ, ಹೊರಬೈಲ್ –ಮತ್ತಿಕೊಪ್ಪ, ಅಡ್ಡೇರಿ, ಮಸ್ಕಾನಿ, ದೋಬೈಲ್, ಹೆಬ್ಬಳ್ಳಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಬೆಳ್ಳೂರು, ಕಲ್ಲುಹಳ್ಳದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಇದೆ. ಕಾಲೇಜು ಕಲಿಕೆಗೆ ವಿದ್ಯಾರ್ಥಿಗಳು 15–20 ಕಿ.ಮಿ. ಅಂತರದ ರಿಪ್ಪನ್‌ಪೇಟೆ, ಕೋಣಂದೂರು ಹಾಗೂ 30–40 ಕಿ.ಮಿ ಅಂತರದ ಶಿವಮೊಗ್ಗ , ಸಾಗರ ಗಳಿಗೆ ಎಡತಾಕಬೇಕು.
ನೆಟ್ವರ್ಕ್ ಸಮಸ್ಯೆ:
ಈ ಭಾಗದಲ್ಲಿ ಸಂಪರ್ಕಕ್ಕೆ ಯಾವುದೇ ಮೊಬೈಲ್ ನೆಟ್ ವರ್ಕ್ ಗಳಿಲ್ಲ. ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣಕ್ಕೆ ಗುಡ್ಡದ ತುದಿ, ಮರದ ಮೇಲೆ ಅಟ್ಟಣಿಗೆ ನಿರ್ಮಿಸಿಕೊಂಡಿರುವುದು ಸಹ ನಡೆದಿದೆ. ಅದರಲ್ಲಿಯೂ ಮಳೆಗಾಲದಲ್ಲಿ ಸಂಪರ್ಕ ಹಾಗೂ ವಿದ್ಯುತ್ಚಕ್ತಿ ನಿಷ್ಕ್ರೀಯಗೊಂಡಿರುತ್ತದೆ.
ಕಾಲುಸಂಕಗಳ ಬೇಡಿಕೆ :
ಈ ಹಳ್ಳಿಯ ದುರ್ಗಮ ಮಾರ್ಗವು, ಶಾಲಾ ಮಕ್ಕಳ ಬೈಸಿಕಲ್ ಸಹ ಒಂದೇ ವಾರಕ್ಕೆ ಅಟ್ಟ ಸೇರಿವೆ. ಕಾಲು ಈ ಭಾಗದ ಮಜರೆ ಹಳ್ಳಿಗಳಿಗೆ ಇನ್ನೂ 20ಕ್ಕೂ ಅಧಿಕ ಕಾಲು ಸಂಕಗಳ ಬೇಡಿಕೆ ಇದೆ. ಕಾರ್ಯ ರೂಪಕ್ಕೆ ಬಂದಿಲ್ಲ.
ಪಕ್ಕಾ ಬುಡಕಟ್ಟು ಜನಾಂಗದಂತೆ ಬದುಕು ಸಾಗಿಸುತ್ತಿರುವ ಈ ಭಾಗದ ವಾಸಿಗಳು ಭೂಮಿ ಹಕ್ಕಿಗಾಗಿ ಸತತ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಅವರ ಬದುಕಿಗೆ ಯಾವುದೇ ಆಶಾಭಾವ ಮೂಡಿಲ್ಲ.
ಗ್ರಾಮಗಳ ಜೀರ್ಣೋದ್ಧಾರಕ್ಕಾಗಿ ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳು ಬಿಡುಗಡೆ ಮಾಡಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಆದ್ರೆ ಇಲ್ಲೊಂದು ಗ್ರಾಮ ಸುಮಾರು 70 ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಇಷ್ಟೆಲ್ಲಾ ಸಂಕಷ್ಟ ಅನುಭವಿಸುತ್ತಿರುವ ಈ ಕುಗ್ರಾಮದ ಜನರ ಅಳಲು ಜಿಲ್ಲಾಧಿಕಾರಿಗಳಾದ ಸೆಲ್ವಮಣಿ ರವರ ಗ್ರಾಮ ವಾಸ್ತವದಿಂದ ಕೊನೆಗೊಳ್ಳಬಹುದೆ..!!!???? ಕಾದುನೋಡಬೇಕಾಗಿದೆ.



