Headlines

ಆಂಜನೇಯ ಇಂದಿನ ಜನತೆಗೆ ಆದರ್ಶಪ್ರಾಯನಾಗಿದ್ದಾನೆ : ಮುರುಘಾ ಮಠದ ಶ್ರೀಗಳು.

ನಿಸ್ವಾರ್ಥ ಸೇವಕನಾಗಿದ್ದು ಹನುಮಂತ ಶ್ರೀರಾಮನಲ್ಲಿಯೇ ಜೀವನ ಕಂಡುಕೊಂಡಿದ್ದ, ರಾಮನಾಮ ತಪದಲ್ಲಿಯೇತನ್ನ ಸರ್ವಸ್ವ ಅಡಗಿದೆ ಎಂಬ ಮನಸ್ಥಿತಿಯಲ್ಲಿ ಜೀವನಕಳೆದ ಆಂಜನೇಯ ಇಂದಿನ ಜನತೆಗೆ ಆದರ್ಶಪ್ರಾಯನಾಗಿದ್ದಾನೆ. ಇರುವುದಷ್ಟನ್ನೇ ಆತ್ಮ ಸಂತೋಷದಿಂದ ಅನುಭವಿಸಿ, ಅನಾವಶ್ಯಕ ಆಸೆಗಳಿಗೆ ಬಲಿಯಾಗದೆ ಸಂತೃಪ್ತ ಜೀವನ ಸಾಗಿಸಿದ ಪ್ರೇರಕನಂತೆ ಎಲ್ಲರ ಜೀವನ ಹಸನಾಗಲೀ ಎಂದು ಆನಂದಪುರ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ರಿಪ್ಪನ್‌ಪೇಟೆ ಸಮೀಪದ ಹುಂಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇವಾಲಯ ಲೋಕಾರ್ಪಣೆ ಹಾಗು ಆಂಜನೇಯ ಮೂರ್ತಿಯ ಪುನರ್ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ನಂತರ ಮಾತನಾಡಿದ ಹೊಂಬುಜ ಜೈನಮಠದ ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಧ್ಯಾತ್ಮಿಕವಾಗಿ ಸಮಾಜದಲ್ಲಿ ಆಚರಿಸಲಾಗುತ್ತಿರುವ ಹಬ್ಬ ಹರಿದಿನ, ವ್ರತ ಮುಂತಾದ ಧಾರ್ಮಿಕ ಆಚರಣೆಗಳು ಕಾಲ್ಪನಿಕವಾದವುಗಳಲ್ಲ. ನಿಗದಿತ ಉದ್ದೇಶಕ್ಕಾಗಿ ನಮ್ಮ ಪೂರ್ವಜನರು ಅನುಸರಿಸಿಕೊಂಡು ಬಂದ ಆಚಾರಗಳ ಅನುಕರಣೆಗಳು ಎಂದರು.

ಪರಂಪರಾಗತ ಆಚರಣೆಗಳಿಗೆ ತನ್ನದೆ ಆದ ಇತಿಹಾಸವಿದೆ. ಅಂದಿನ ಕಾಲದಲ್ಲಿ ಸಮಾಜದ ಒಳಿತಿಗಾಗಿ ಮಾಡಿದಂತಹ ಯೋಜನೆಗಳು ಇಂದಿಗೂ ಮುಂದುವರೆದಿವೆ. ರಾಮಾಯಣ, ಮಹಾಭಾರತ ಕಾಲ್ಪನಿಕವೆಂಬ ಚರ್ಚೆ, ಕುತರ್ಕಗಳು ನಡೆದಿರುವ ಈ ಕಾಲಘಟ್ಟದಲ್ಲಿ ಭೂಮಿಯ ಮೇಲೆ ಪುರಾಣದ ಘಟನೆಗಳ ಕುರುಹುಗಳು ಪತ್ತೆಯಾಗುತ್ತಿವೆ.ಐದು ಸಾವಿರ ವರ್ಷಗಳ ಹಿಂದೆ ರಾಮಾಯಣ ನಡೆದು, ಶ್ರೀರಾಮಚಂದ್ರ ಭೂಮಿಯನ್ನು ಆಳ್ವಿಕೆಮಾಡಿ ಸರ್ವಶ್ರೇಷ್ಠ ಸರ್ವೋತ್ತಮ ಆಡಳಿತವನ್ನು ನೀಡಿದ್ದರು ಎಂಬುದು ಜನಜನಿತ. ಈ ಕಾಲದಲ್ಲಿಯೇ ಹನುಮನೆಂಬ ಶ್ರೇಷ್ಠಭಕ್ತ ಶ್ರೀರಾಮರಿಗಿದ್ದು ರಾಮ ಸೇವೆಯೆ ಪರಮ ಪಾವನ ಎಂದು ತನ್ನ ಸರ್ವಸ್ವವನ್ನು ರಾಮನಿಗಾಗಿ ಮುಡಿಪಾಗಿಟ್ಟಿದ್ದನು. ಶಕ್ತಿಶಾಲಿ, ಸೇವಾಕರ್ತ ಆಂಜನೇಯನ ಜಯಂತಿಯೆಂದು ಶತಮಾನಗಳ ಕಾಲದ ದೇವಸ್ಥಾನದಲ್ಲಿ ನೂತನ ಮಂದಿರದೊಂದಿಗೆ ಪುನರ್ ಪ್ರತಿಷ್ಠಾಪನೆ ನಡೆಸುತ್ತಿರುವುದು ಪುಣ್ಯದ ಕೆಲಸವೆಂದರು.ಹನುಮನು ಕನ್ನಡ ನಾಡಿನವನು ಇತಿಹಾಸಗಳ ಅಧ್ಯಯನದಲ್ಲಿ ಇಂತಹ ಒಂದು ಕುರುಹುಗಳು ಲಭ್ಯವಾಗುತ್ತಿದೆ. ಕಿಷ್ಕಿಂದೆ ಇವರ ಜನ್ಮಸ್ಥಳ ಎಂಬುದು ಚರ್ಚೆಯಲ್ಲಿದೆ. ಕರ್ನಾಟಕದಲ್ಲಿಯೇ ಪುರುಷರಿಗೆ ಆಂಜನೇಯ ಮಾರುತಿ, ಹನುಮಂತ ಇತ್ಯಾದಿ ಹೆಸರನ್ನಿಟ್ಟು ಕರೆಯುತ್ತಿದ್ದಾರೆ. ಕೋಟೆ, ಕೊತ್ತಲಗಳ ಮುಖ್ಯದ್ವಾರಗಳಲ್ಲಿ ಆಂಜನೇಯನನ್ನು ರಾಜಮಹಾರಾಜರು ಪ್ರತಿಷ್ಠಾಪಿಸಿದ್ದಾರೆ. ಇದರಿಂದ ಈ ಕ್ಷೇತ್ರ ಮಹತ್ವದ ಜೊತೆಗೆ ಐತಿಹಾಸಿಕ ಸ್ಪರ್ಶ ಜನ ಜೀವನದಲ್ಲಿರುವುದು ಕಾಣಬಹುದು.ಸಂಭ್ರಮದ ಜಾತ್ರಾಮಹೋತ್ಸವಗಳ ಆಚರಣೆಯಲ್ಲಿ ಶ್ರೀರಾಮನ ಆಡಳಿತದಂತೆ ಸರ್ವಜನಾಂಗವನ್ನು ಪ್ರೀತಿಸುವ, ಸಹಕಾರ ತತ್ವದೊಂದಿಗೆ ಸಮಾನತೆಯ ಸಮಾಜ ನಿರ್ಮಾಣವಾಗಲಿ ಎಂದರು. 

ಧಾರ್ಮಿಕ ಸಭೆಯಲ್ಲಿ ನಿಟ್ಟೂರು ನಾರಾಯಣ ಗುರು ಸಂಸ್ಥಾನಮಠದ ಶ್ರೀರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಗುರುವಿನ ಮೇಲೆ ಭಕ್ತರ ಭಕ್ತಿ ಹೇಗಿರಬೇಕೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಅಂತಹ ಮಹಾನ್ ರಾಮ ಭಕ್ತ ಆಂಜನೇಯ ಇಂದಿನ ಯುವ ಸಮೂಹಕ್ಕೆ ಆದರ್ಶಪ್ರಾಯರಾಗಿದ್ದಾರೆ.  ನನ್ನ ಗುರುವಿನ ಒಳಿತಿಗಾಗಿ ಮತ್ತು ಸೇವೆಗಾಗಿ ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟ ಆಂಜನೇಯ ಆಸಕ್ತಿಯನ್ನು ಹೊಂದಿದ್ದರು ಸಹ ಸೌಮ್ಯತೆಯಿಂದ ಭಕ್ತರ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಆಂಜನೇಯನ ನಿಷ್ಠೆ ಪ್ರಾಮಾಣಿಕತನ ಸಮಯ ಪ್ರಜ್ಞೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.

 ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನ ಸೇವಾ ಸಮಿತಿಯ ಅಶ್ವತ್ಥನಾರಾಯಣ ವಹಿಸಿದ್ದು, ಗ್ರಾ.ಪಂ. ಅಧ್ಯಕ್ಷೆ ಪಲ್ಲವಿ ಚೇತನ್, ಯದುಕುಮಾರ, ಕಿರಣ, ಶ್ರೀಧರ, ವಿನಾಯಕ , ನಾಗೇಂದ್ರ ಈರನಬೈಲು, ಮಂಜಪ್ಪ ಮಾಸ್ಟರ್, ಶಿಕ್ಷಕ ದಿನೇಶ ಇನ್ನಿತರರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇


Leave a Reply

Your email address will not be published. Required fields are marked *