ರಿಪ್ಪನ್‍ಪೇಟೆ: ಹಲವು ದಿನಗಳಿಂದ ಕಾಡಾನೆ ದಾಳಿಗೆ ಒಳಗಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದರೂ ನಿರ್ಲಕ್ಷ್ಯ ತೋರಿದ್ದ ಅರಣ್ಯ ಇಲಾಖೆಯ ನಡೆ ಸರಿಯಲ್ಲ. ಇನ್ನು ಒಂದುವಾರದೊಳಗಾಗಿ ಕಾಡಾನೆ ಹಾವಳಿಯಿಂದ ರೈತರಿಗೆ ಮುಕ್ತಿ ನೀಡದಿದ್ದಲ್ಲಿ ಮೂಗುಡ್ತಿ ವನ್ಯಜೀವಿ ವಲಯ ಕಛೇರಿ ಎದುರು ರೈತರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಾರ್ವಜನಿಕರೊಂದಿಗೆ ಮಾಜಿ ಸಚಿವರು ಅರಣ್ಯಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಗೆ ಆಗಮಿಸಿದ ಸಂದರ್ಭದಲ್ಲಿ ಅರಣ್ಯ ಇಲಾಖಾ ಹಿರಿಯ ಅಧಿಕಾರಿಗಳಿಂದ ಆನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಗೆ ಸಜ್ಜುಗೊಂಡಿರುವುದಾಗಿ ಹಾಗೂ ಕಾರ್ಯಾಚರಣೆಗೆ ಸಕ್ರೇಬೈಲಿನ ಮೂರು ಆನೆಗಳನ್ನು ತರಿಸಿದ್ದು ಶ್ರೀಘ್ರ ಕಾರ್ಯಪ್ರೌವೃತ್ತರಾಗುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟ ಮಾಜಿ ಸಚಿವರು ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ ಕಾಡಾನೆ ಹಿಡಿಯುವ ಕಾರ್ಯವು ಅರಣ್ಯ ಇಲಾಖೆಯ ವ್ಯಾಪ್ತಿಯ ಪ್ರಧಾನಕಾರ್ಯದರ್ಶಿಯವರ ಮಟ್ಟದಲ್ಲಿ ತೆಗೆದುಕೊಳ್ಳಬಹುದಾದ ತೀರ್ಮಾನವಾಗಿದೆ. ಇದಕ್ಕೆ ಕೆಲ ದಿನಗಳ ಸಮಯಾವಕಾಶವು ಬೇಕಾಗುತ್ತದೆ. ಈ ಪ್ರಕ್ರಿಯೆಗೆ ಮುಖ್ಯಮಂತ್ರಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಇಲಾಖೆ ಕಾಡಾನೆ ಓಡಿಸುತ್ತೇವೆಂದು ಜನರಿಗೆ ಮರಳು ಮಾಡುವುದು ಬೇಡ. ಒಮ್ಮೆಬಂದ ಕಾಡಾನೆ ಕೆಲವು ದಿನಗಳ ನಂತರ ಮತ್ತದೇ ಜಾಗಕ್ಕೆ ಬರುವುದು ಅದರ ಸ್ವಭಾವÀ. ಅದಕ್ಕಾಗಿ ಈ ಭಾಗದ ಜನರಿಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಈಗಾಗಲೆ ಅಪಾರಪ್ರಮಾಣದ ಬೆಳೆ ನಾಶದಿಂದ ಹಲವು ರೈತರು ಜಿಗುಪ್ಸೆಗೊಂಡಿದ್ದಾರೆ. ಇಲ್ಲಿನ ಜನರ ಬೆಳೆ ಹಾಗೂ ಜೀವರಕ್ಷಣೆಗೆ ಇಲಾಖೆ ತ್ವರಿತ ಕ್ರಮ ಜರುಗಿಸಬೇಕು ಎಂದು ಸ್ಥಳದಲ್ಲಿದ್ದ ಆರ್‍ಎಫ್‍ಓ ಅಫ್ರಿನಾಜ್ ಶುಂಠಿರವರಿಗೆ ಸೂಚಿಸಿದರು.
ಕಾಡಾನೆ ದಾಳಿಯು ಹಲವು ದಿನಗಳಿಂದ ನಡೆಯುತ್ತಿದ್ದರು, ರೈತರನ್ನು ರಕ್ಷಿಸುವ ಯಾವುದೇ ಕ್ರಮ ಕೈಗೊಂಡಿಲ್ಲ ಇದರ ಪರಿಣಾಮ ಕಾಡನೆಗಳು ನಿರಂತರ ಬೆಳೆನಷ್ಟಮಾಡುತ್ತಿವೆ. ರೈತರ ಸಮಸ್ಯೆಗೆ ಇತಿಶ್ರೀ ಹಾಡಬೇಕಾದರೆ ಹೆದ್ದಾರಿಪುರ ಮತ್ತು ಅರಸಾಳು ಭಾಗದಲ್ಲಿ ಕಾಡಾನೆಗಳು ಮತ್ತೆಬರದಂತೆ ಶಾಶ್ವತ ಪರಿಹಾರ ಯೋಜನೆ ರÀೂಪಿಸಬೇಕೆಂದು ದೂರವಾಣಿ ಮೂಲಕ ಶಿವಮೊಗ್ಗ ವನ್ಯ ಜೀವಿ ವಿಭಾಗದ ಡಿ.ಎಫ್.ಓ. ಐ.ಎಂ.ನಾಗರಾಜ್‍ಗೆ ತಾಕೀತು ಮಾಡಿದರು.
ಕಾಡಾನೆದಾಳಿಯಿಂದ ರೈತರು ಅಡಿಕೆ, ತೆಂಗು, ಬಾಳೆ ಕಬ್ಬು ಇನ್ನಿತರ ಬೆಳೆಗಳನ್ನು ಕಳೆದುಕೊಂಡು ನಷ್ಟ ಅನುಭವಿಸಿದ್ದಾರೆ. ಸಂಕಷ್ಟಕ್ಕೊಳಗಾದ ಎಲ್ಲಾ ರೈತರಿಗೂ ಸಮಗ್ರ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ದಾಳಿಗೊಳಗಾದ ಸುಳಕೋಡು, ಕಾರೆಹೊಂಡ ಗ್ರಾಮದ ತೋಟಗಳಿಗೆ ಭೇಟಿನೀಡಿದರು.
ಕಾಡಾನೆ ಹಿಮ್ಮೆಟ್ಟಿಸಲು ಸಜ್ಜುಗೊಂಡ ಇಲಾಖೆ:
ಈಗಾಗಲೇ ಕೆಲದಿನಗಳಿಂದ ರೈತರ ಜಮೀನುಗಳಿಗೆ ನುಗ್ಗಿ ಬೆಳೆನಷ್ಟ ಮಾಡುತ್ತಿದ್ದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಕ್ರೆಬೈಲಿನಿಂದ ಮೂರು ಪರಿಣಿತ ಆನೆಗಳನ್ನು ತರಿಸಲಾಗಿದ್ದು, ಕಾರ್ಯಾಚರಣೆಗೆ ಮಾರ್ಗದರ್ಶಕರಾಗಿ ಎಂಟು ಮಾವುತ ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ. ಸ್ಥಳೀಯ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾಡಾನೆ ಚಲನವಲನಗಳ ಮಾಹಿತಿಯನ್ನು ನೀಡುತ್ತ ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕಾಡಾನೆಗಳನ್ನು ಹಿಮ್ಮೆಟ್ಟಿಸಲಾಗುವುದೆಂದು ಡಾ|| ವಿನಯ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ, ಗ್ರಾ.ಪಂ.ಸದಸ್ಯ ಪ್ರವೀಣ್ ಸುಳಕೋಡು, ಮಂಜುನಾಥ, ಗೌರಮ್ಮ, ಈಶ್ವರಪ್ಪ ಕುಕ್ಕಳಲೆ, ಸುರೇಶ, ಓಂರಾಜ, ಶೇಷಪ್ಪ, ಲೋಕಪ್ಪಗೌಡ ಇನ್ನಿತರರಿದ್ದರು.