ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲೂರು ಸರ್ಕಾರಿ ಕಿರಿಯ ಶಾಲೆಯ ನೆಲ ಹಾಸಿಗೆ ಟೈಲ್ಸ್ ಅಳವಡಿಕೆ ಕಾಮಗಾರಿ ಕಳಪೆ ಗುಣಮಟ್ಟ ಹೊಂದಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಬಿಜೆಪಿ ಮುಖಂಡ ಆದರ್ಶಗೌಡ ಕಲ್ಲೂರು ಮಾತನಾಡಿ ಶಾಲೆ ನೆಲಹಾಸು ಕಾಮಗಾರಿಗೆ ಒಂದುವರೆ ಲಕ್ಷ ರೂಪಾಯಿ ಅನುದಾನ ಮಂಜೂರಾಗಿರುವ ಬಗ್ಗೆ ಗುತ್ತಿಗೆದಾರ ತಿಳಿಸಿರುತ್ತಾನೆ. ಆದರೆ ಕಾಮಗಾರಿ ಮಂಜೂರಾತಿ ವಿಷಯ ಶಾಲಾಭಿವೃದ್ಧಿ ಸಮಿತಿಗಾಗಲೀ, ಸ್ಥಳೀಯರೇ ಆದ ಗ್ರಾಮ ಪಂಚಾಯತಿ ಅಧ್ಯಕ್ಷರಿಗಾಗಲೀ ಹಾಗೂ ಗ್ರಾಮಸ್ಥರಿಗಾಗಲೀ ಮಾಹಿತಿ ಇರುವುದಿಲ್ಲ. ಏಕಾಏಕಿ ಬುಧವಾರ ಬೆಳಿಗ್ಗೆ ಮರಳು, ಟೈಲ್ಸ್ ತಂದು ತ್ವರಿತವಾಗಿ ಕಾಮಗಾರಿ ಆರಂಭಿಸಿದ್ದಾರೆ. ಗ್ರಾಮಸ್ಥರ ಗಮನಕ್ಕೆ ಬಂದು ಸ್ಥಳಕ್ಕಾಗಮಿಸಿ…ನೋಡಿದಾಗ ಶಾಲಾ ಕೊಠಡಿಯಲ್ಲಿರುವ ಸಿಮೆಂಟ್ ನೆಲದ ಮೇಲೆ ಅವೈಜ್ಞಾನಿಕವಾಗಿ ಟೈಲ್ಸ್ ಹಾಕಿರುತ್ತಾನೆ. ಕೆಲಸಕ್ಕೆ ಬಳಸಿದ ಮರಳು, ಸಿಮೆಂಟ್ ಸಹ ಕಳಪೆ ಗುಣಮಟ್ಟದ್ದಾಗಿರುತ್ತದೆ. ಆದ್ದರಿಂದ ಕಾಮಗಾರಿ ಸ್ಥಗಿತಗೊಳಿಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರೆ ಅಸಡ್ಡೆಯಿಂದ ವರ್ತಿಸಿ ಕಾಮಗಾರಿಯ ಹಣ ಪಡೆಯಲು ಹುನ್ನಾರ ನಡೆಸಿರುತ್ತಾನೆ. ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಗುಣಮಟ್ಟದ ಕಾಮಗಾರಿಯೊಂದಿಗೆ ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರ ಸತೀಶನ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ, ಗಂಗಾಧರ, ರಾಜೇಂದ್ರ, ಷಣ್ಮುಖ, ಕೃಷ್ಣಮೂರ್ತಿ, ಉಮಾಕಾಂತ,ವಿಶ್ವನಾಥ, ರಾಜೇತ ಇನ್ನಿತರರಿದ್ದರು.