ಹೆತ್ತ ತಾಯಿಯ ಆಸ್ತಿಯನ್ನು ಕಬಳಿಸಿ ಮನಸೋ ಇಚ್ಚೇ ಥಳಿಸಿ ಅಷ್ಟಕ್ಕೂ ತೃಪ್ತಿಯಾಗದ ಪಾಪಿ ಮಕ್ಕಳು ಸಾಕಿ ಸಲುಹಿದ ತಾಯಿಯ ತಲೆ ಬೋಳಿಸಿ ಎಸೆದಿರುವ ಘಟನೆ ನಡೆದಿದೆ.
ಹೌದು ಇಂತಹ ದಾರುಣ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆವಿನಹಳ್ಳಿ ಎಂಬಲ್ಲಿ ನಡೆದಿದೆ. 95 ವರ್ಷದ ವೃದ್ಧೆ ಸಾವಿತ್ರಮ್ಮನವರ ಕಥೆ ಇದಾಗಿದ್ದು ಈಕೆಗೆ 4ಜನ ಮಕ್ಕಳಿರುತ್ತಾರೆ. ಹಿರಿಯ ಮಗ ಶಿವರುದ್ರಯ್ಯ ಎರಡನೇ ಮಗ ಚಂದ್ರಶೇಖರಯ್ಯ. ಮೂರನೆಯವರು ಈರಮ್ಮ ಹಾಗೂ ನಾಲ್ಕನೆಯ ಪುತ್ರ ಎ.ವಿ. ಪ್ರಕಾಶ್ ಅಲಿಯಾಸ್ ಬೂದಯ್ಯ ಅಲಿಯಾಸ್ ವೀರಣ್ಣ ಇವರುಗಳು ಹೇಳೋಕೆ ಮಾತ್ರ ಮಕ್ಕಳು, ನಡೆದುಕೊಂಡಿರೋದು ಮಾತ್ರ ರಾಕ್ಷಸರಂತೆ. ವೃದ್ಧೆ ಸಾವಿತ್ರಮ್ಮ ತಮ್ಮ ಹೆತ್ತತಾಯಿ ಎನ್ನುವುದನ್ನೂ ಮರೆತು ಆಕೆಯ ಬಳಿ ಇರೋ ಆಸ್ತಿ ಎಲ್ಲಾ ತಮ್ಮದಾಗಿಸುವ ಭರಾಟೆಯಲ್ಲಿ ವೃದ್ಧ ತಾಯಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬೀದಿಗೆ ಎಸೆದಿದ್ದಾರೆ.
ಈ ವೃದ್ಧೆ ಸಾವಿತ್ರಮ್ಮನ ಕಥೆ ಕೇಳಿದವರ ಕಣ್ಣಲ್ಲಿ ನೀರು ಬಾರದೇ ಇರದು. ಏಕೆಂದರೆ ಹಿಂದೆ ಈ ಸಾವಿತ್ರಮ್ಮ ಕೈ ಕಾಲುಗಳು ಗಟ್ಟಿ ಇದ್ದ ಸಂದರ್ಭದಲ್ಲಿ ಈ ಆವಿನಹಳ್ಳಿಯ ಅದೆಷ್ಟೋ ಜನ ಮಕ್ಕಳಿಗೆ ಅನ್ನ ನೀಡಿದ್ದರಂತೆ. ತನ್ನೂರಿನಲ್ಲಿ ಹಸಿವು ಎಂದ ಮಕ್ಕಳಿಗೆ ಎಂದಿಗೂ ಉಪವಾಸ ಇರದಂತೆ ನೋಡಿಕೊಂಡಿದ್ದರಂತೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತುತ್ತು ಅನ್ನಕ್ಕೂ ಗತಿಯಿಲ್ಲದಂತೆ ಈಕೆಯ ಮಕ್ಕಳು ಮಾಡಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ಅಜ್ಜಿಯ ಬಳಿ ಇದ್ದ 2 ಎಕರೆ ಭೂಮಿ. ಅಜ್ಜಿ ಸಾವಿತ್ರಮ್ಮ ಗಟ್ಟಿಮುಟ್ಟಾಗಿದ್ದ ಸಮಯದಲ್ಲಿ ಮಗಳಾದ ಈರಮ್ಮ ಅಜ್ಜಿಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದರು. ಸಾವಿತ್ರಮ್ಮ ಬಹುತೇಕ ಜೀವನವನ್ನು ಈರಮ್ಮ ಅವರ ಕುಟುಂಬಕ್ಕೇ ಸವೆಸಿದ್ದಾರೆ. ಮಣ್ಣಿನ ಗೋಡೆಯ ಮನೆಯಿಂದ, ಟೈಲ್ಸ್ ಮನೆಯವರೆಗೂ ಈರಮ್ಮನ ಜೀವನ ಸಾಗಿಬಂದಿದ್ದು, ಸಾವಿತ್ರಮ್ಮ ಈರಮ್ಮನ ಮನೆಗೆ ಜೀತದಂತೆ ದುಡಿದಿದ್ದಾರೆ.
ಆ ಸಮಯದಲ್ಲಿ ಅಜ್ಜಿಯಿಂದ 2 ಎಕರೆ ಭೂಮಿಯನ್ನು ತನ್ನ ಹೆಸರಿಗೆ ದಾನ ಪತ್ರದ ಮುಖೇನ ಪಡೆದುಕೊಂಡಿದ್ದಳು. ಹೀಗೆ ಭೂಮಿ ತನ್ನ ಕೈವಶವಾಗುತ್ತಿದ್ದಂತೆ ತನ್ನ ವರಸೆಯನ್ನು ಬದಲಾಯಿಸಿದ್ದು ಈಕೆಯ ಮಗಳಾದ ಈರಮ್ಮ ಅಜ್ಜಿಯನ್ನು ಮನೆಯಿಂದ ಹೊರಗಿರೋ ದನದ ಕೊಟ್ಟಿಗೆಯಲ್ಲಿ ಬಿಸಾಡಿದ್ದರು. ಈ ವಿಷಯವನ್ನು ತಿಳಿದ ಅಜ್ಜಿಯ ಹಿರಿಯ ಮಗನಾದ ಶಿವರುದ್ರಯ್ಯ ಅಜ್ಜಿಯನ್ನು ತಾನು ನೋಡಿಕೊಳ್ಳುತ್ತೇನೆ ಎಂದು ತನ್ನ ಮನೆಗೆ ಕರೆದೊಯ್ದಿದ್ದರು. ಆದರೆ ಈ ಶಿವರುದ್ರಯ್ಯ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಮನೆಗೆ ಕರೆದುಕೊಂಡು ಹೋಗಿರಲಿಲ್ಲ. ಅಜ್ಜಿಯ ಮುಖಾಂತರ ನ್ಯಾಯಾಲಯಕ್ಕೆ ಅರ್ಜಿಯನ್ನು ಹಾಕುವ ಶಿವರುದ್ರಪ್ಪ ಮಗಳಿಗೆ ದಾನ ಪತ್ರದ ಮುಖೇನ ಬರೆದುಕೊಟ್ಟಿದ್ದ ಜಮೀನನ್ನು ವಜಾ ಮಾಡಿಸಿ ಪುನಃ ಅಜ್ಜಿಯ ಹೆಸರಿಗೆ ಬರುವಂತೆ ನೋಡಿಕೊಳ್ಳುತ್ತಾರೆ.
ಇಷ್ಟಕ್ಕೇ ಸುಮ್ಮನಾಗದ ಈರಮ್ಮ ಅಜ್ಜಿಯನ್ನು ಮತ್ತೆ ತಮ್ಮ ಮನೆಗೆ ಕರೆಯಿಸಿಕೊಂಡು, ಅಜ್ಜಿಯ ಮುಖಾಂತರ ತಮ್ಮ ಅಣ್ಣ, ಅಂದರೆ ಅಜ್ಜಿಯ ಹಿರಿಯ ಮಗ ಶಿವರುದ್ರಯ್ಯನ ವಿರುದ್ದ ನ್ಯಾಯಾಲಯಕ್ಕೆ ಹೋಗಿ, ಅಜ್ಜಿಗೆ ಪರಿಹಾರ ರೂಪದಲ್ಲಿ ಮಾಸಿಕ ಇಂತಿಷ್ಟು ಹಣ ನೀಡಬೇಕು ಎಂಬ ಆದೇಶ ತರುವಲ್ಲಿ ಯಶಸ್ವಿಯಾಗುತ್ತಾರೆ.
ಮಾಸಿಕ ಹಣ ಕೊಡಬೇಕಲ್ಲ ಸಂಕಟಕ್ಕೆ ಬಿದ್ದ ಶಿವರುದ್ರಯ್ಯ ಪುನಃ ಅಜ್ಜಿಯ ಮನವೊಲಿಸಿ, ಊರಿನ ಮುಖಂಡರನ್ನೂ ಒಪ್ಪಿಸಿ, ಎಲ್ಲರ ಸಮ್ಮುಖದಲ್ಲೇ ತನ್ನ ಮನೆಗೆ ಕರೆದುಕೊಂಡು ಬರುತ್ತಾರೆ. ಈ ಬಾರಿ ಶಿವರುದ್ರಯ್ಯ ಹಾಗೂ ಅವರ ಮಡದಿ ರೇಣುಕಾ ತಮ್ಮ ಅಸಲಿ ಮುಖ ಪ್ರದರ್ಶಿಸುತ್ತಾರೆ. ತಮ್ಮ ಒಳಗಿದ್ದ ರಾಕ್ಷಸೀ ಪ್ರವೃತ್ತಿಗೆ ಕೆಲಸ ನೀಡುವ ಈ ದಂಪತಿಗಳು ಅಜ್ಜಿ ಸಾವಿತ್ರಮ್ಮಗೆ ಮಾನಸಿಕ, ದೈಹಿಕ ಕಿರುಕುಳ ಕೊಡಲು ಪ್ರಾರಂಭಿಸುತ್ತಾರೆ.
ಶಿವರುದ್ರಯ್ಯ ಮಾನವೀಯತೆಯನ್ನೇ ಮರೆತಿದ್ದಾರೆ ಎನಿಸುತ್ತದೆ. 95 ವರ್ಷದ ವೃದ್ಧೆ ಎನ್ನುವುದನ್ನು ಮರೆತ ಮಗ ಅಮ್ಮನಿಗೆ ಮನಸೋ ಇಚ್ಛೆ ಥಳಿಸೋಕೆ ಪ್ರಾರಂಭಿಸುತ್ತಾರೆ. ನಿನ್ನ ಬಳಿ ಇರುವ ಆ ಭೂಮಿಯನ್ನು ನನ್ನ ಹೆಸರಿಗೆ ಬರೆದುಕೊಡು ಎಂದು ಕಾಡೋಕೆ ಶುರು ಮಾಡ್ತಾರೆ. ಅಜ್ಜಿ ಇದಕ್ಕೆ ಒಪ್ಪದೇ ಇದ್ದ ಕಾರಣಕ್ಕೆ ಕುಪಿತಗೊಂಡ ಶಿವರುದ್ರಯ್ಯ ಅಜ್ಜಿಯ ಮೈ ಮೇಲಿನ ಚರ್ಮವು ಸುಲಿದುಹೋಗುವಂತೆ ಬಡಿಯುತ್ತಾರೆ. ಅಜ್ಜಿಗೆ ನಿತ್ಯವೂ ತಲೆಬಾಚುವುದು ಯಾರು ಅಂತ ಆಕೆಯ ತಲೆ ಕೂದಲನ್ನೇ ಬೋಳಿಸಿದ ಅಜ್ಜಿ ವಿರೂಪವಾಗಿ ಕಾಣುವಂತೆ ಮಾಡುತ್ತಾರೆ. ಆ ನಂತರ ಅಜ್ಜಿಯನ್ನು ಮನೆಯಿಂದ ಹೊರಕ್ಕೆ ಬಿಸಾಡುತ್ತಾರೆ. ನೂರಾರು ಜನರಿಗೆ ಅನ್ನ ನೀಡಿದ ಈ ಅಜ್ಜಿ ತುತ್ತು ಅನ್ನವೂ ಇಲ್ಲದೆ ಬೀದಿಗೆ ಬಿದ್ದಿರುವುದನ್ನು ನೋಡಿದ ಆವಿನಹಳ್ಳಿ ಗ್ರಾಮಸ್ಥರು ಮಾನವೀಯತೆ ತೋರುತ್ತಾರೆ.
ನಾವು ಸಣ್ಣವರಿರುವಾಗ ಈ ಅಜ್ಜಿಯ ಕೈಯಿಂದ ಅದೆಷ್ಟೋ ಬಾರಿ ಅನ್ನ ತಿಂದಿದ್ದೇವೆ ಈ ಋಣವನ್ನು ತೀರಿಸಬೇಕು ಎಂದುಕೊಂಡ ಆ ಗ್ರಾಮಸ್ಥರು, ಅಜ್ಜಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಶಿರಸಿಯಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಗ್ರಾಮಸ್ಥರು ಅಜ್ಜಿಯನ್ನು ಈ ಪರಿಸ್ಥಿತಿಗೆ ತಂದಂತಹ ಮಕ್ಕಳಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನುವ ಕಾರಣಕ್ಕೆ ಪಂಚಾಯಿತಿ ಅಧ್ಯಕ್ಷರಾಗಿರುವ ಮಣಿ ಹಾಗೂ ಗ್ರಾಮಸ್ಥರಾದ ರಾಜು ಪಟೇಲ್, ಶಫಿಯಾ, ರಾಜೇಂದ್ರ ಗೌಡ್ರು ಹಾಗೂ ಪ್ರಶಾಂತ್ ಹೆಗಡೆ ಇವರೆಲ್ಲ ಒಂದಾಗಿ ಸಾಗರ ಗ್ರಾಮಾಂತರ ಠಾಣೆಯಲ್ಲಿ ಮಗ ಶಿವರುದ್ರಪ್ಪ ಹಾಗೂ ಆಕೆಯ ಪತ್ನಿಯ ವಿರುದ್ಧ ಅಜ್ಜಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ರು, ಈ ವಿಷಯ ತಿಳಿದ ಮಗ ಶಿವರುದ್ರಯ್ಯ ಹಾಗೂ ಆಕೆಯ ಪತ್ನಿ ಮನೆ ಬಿಟ್ಟು ಪರಾರಿಯಾಗಿದ್ದಾರೆ.
ಅಜ್ಜಿ ಗಟ್ಟಿಮುಟ್ಟಾಗಿದ್ದ ಸಮಯದಲ್ಲಿ ಮಕ್ಕಳು ಎಲ್ಲಾ ತರಹದ ಪ್ರಯೋಜನವನ್ನು ಪಡೆದುಕೊಂಡು ಕೈಲಾಗದ ಸಮಯದಲ್ಲಿ ಈಕೆಯನ್ನು ಬೀದಿಗೆ ತಳ್ಳಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅಜ್ಜಿಯ ಮಗಳು ಈರಮ್ಮ ಕೂಡ ಹೆಣ್ಣು, ಮುಂದೆ ಆಕೆಗೂ ಇಂಥಾ ಪರಿಸ್ಥಿತಿ ಬಂದರೆ ಹೇಗಿರುತ್ತೆ ಅನ್ನೋದು ಅರಿತುಕೊಳ್ಳಬೇಕು ಇದರ ಬದಲಾಗಿ ತನ್ನ ಕೈಯಿಂದ ಭೂಮಿ ಕೈತಪ್ಪಿ ಹೋಯಿತಲ್ಲ ಅನ್ನೋ ಕಾರಣಕ್ಕೆ ತನ್ನ ತಾಯಿಯನ್ನು ಕೊಟ್ಟಿಗೆಯಲ್ಲೇ ಬಿಸಾಡಿದ ಈಕೆ ಎಂಥ ಮಗಳಿರಬಹುದು !
ಇನ್ನುಳಿದ ಇಬ್ಬರು ಮಕ್ಕಳಾಗಿರೋ ಚಂದ್ರಶೇಖರಯ್ಯ ಹಾಗೂ ಎ ವಿ ಪ್ರಕಾಶ್ ನಮಗೂ ಈ ಅಜ್ಜಿಗೂ ಯಾವುದೇ ಸಂಬಂಧವಿಲ್ಲದಂತೆ ನಡೆದುಕೊಂಡಿದ್ದರಂತೆ.ಅದೇನೇ ಇರಲಿ ತಾನು ಗಟ್ಟಿಮುಟ್ಟಾಗಿದ್ದ ಸಮಯದಲ್ಲಿ ಅಜ್ಜಿ ಸಾವಿತ್ರಮ್ಮ ಮಾಡಿದ ಪುಣ್ಯದ ಫಲವೋ ಏನೋ ಆಕೆಯ ಕೈತುತ್ತು ತಿಂದ ಗ್ರಾಮಸ್ಥರು ಅಜ್ಜಿಯ ಸಹಾಯಕ್ಕೆ ನಿಂತಿದ್ದಾರೆ. ಅಜ್ಜಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ಆನಂತರ ವೃದ್ಧಾಶ್ರಮದಲ್ಲಿ ಸೇರಿಸಿ ಆಕೆಯ ಖರ್ಚುವೆಚ್ಚವನ್ನು ಗ್ರಾಮಸ್ಥರೇ ನೋಡಿಕೊಳ್ಳುತ್ತಿದ್ದಾರೆ.
ಈ ನಡುವೆ ಅಜ್ಜಿಯ ಮೊಮ್ಮಗಳಾದ ಅಪರ್ಣಾ ಎಂಬುವವರು ಶಿವಮೊಗ್ಗ ನಗರದಲ್ಲಿ ವಾಸವಾಗಿದ್ದಾರೆ. ಘಟನೆ ನಡೆದು ಕೆಲವು ದಿನಗಳ ನಂತರ ತಡವಾಗಿ ವಿಷಯ ತಿಳಿದ ಇವರು ನನ್ನ ಅಜ್ಜಿಯನ್ನು ಯಾವುದೋ ವೃದ್ಧಾಶ್ರಮದಲ್ಲಿ ಸೇರಿಸಿದ್ದಾರೆ ಎಂದು ತಿಳಿದು ಮನನೊಂದಿದ್ದಾರೆ. ಕೂಡಲೇ ಗ್ರಾಮಸ್ಥರಿಗೆ ಸಂಪರ್ಕಿಸಿದ ಅಪರ್ಣಾ ರವರು ಅಜ್ಜಿ ಸಾವಿತ್ರಮ್ಮಳನ್ನು ತಮ್ಮ ಮನೆಗೆ ಕಳುಹಿಸಿಕೊಡುವಂತೆ ಗ್ರಾಮಸ್ಥರಲ್ಲಿ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ. ಚಿಕ್ಕಂದಿನಿಂದ ನನ್ನನ್ನು ಎತ್ತಿ ಆಡಿಸಿದ ನನ್ನಜ್ಜಿ ಅನಾಥವಾಗಿ ಇರುವುದು ಬೇಡ ಎಲ್ಲಿಯವರೆಗೂ ಅಜ್ಜಿ ಬದುಕಿರುತ್ತಾರೋ ಅಲ್ಲಿಯವರೆಗೂ ನಿಸ್ವಾರ್ಥವಾಗಿ ಅಜ್ಜಿಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಅಪರ್ಣಾ ಹೇಳಿಕೊಂಡಿದ್ದಾರೆ. ಈ ವಿಷಯವಾಗಿ ಗ್ರಾಮಸ್ಥರ ಬಳಿಯೂ ಮಾತನಾಡಿದೆ ಎಂದಿರುವ ಅಪರ್ಣಾ ಆದಷ್ಟು ಬೇಗ ಅಜ್ಜಿ ನನ್ನ ಬಳಿ ಬರುತ್ತಾರೆ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.
ಮಾಹಿತಿ ಕೃಪೆ : F7 ನ್ಯೂಸ್