ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ರವರ ಹೇಳಿಕೆಯನ್ನು ಖಂಡಿಸಿ ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸುವುದರ ಮೂಲಕ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸುತ್ತಾ ಮಾತನಾಡಿದ ಎರಗಿ ಉಮೇಶ್, ರಾಷ್ಟ್ರ ಭಕ್ತರು ಎಂದು ಪ್ರಚಾರಕ್ಕೆ ಸೀಮಿತವಾಗಿರುವ ರಾಜ್ಯದ ಉನ್ನತ ಹುದ್ದೆಯನ್ನು ಅಲಂಕರಿಸಿದ ಕೆ ಎಸ್ ಈಶ್ವರಪ್ಪ ರಾಷ್ಟ್ರ ದ್ರೋಹಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರ ಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ಹಾರಿಸುವುದಾಗಿ ಹೇಳಿಕೆ ನೀಡಿರುವ ಇವರ ಮತ್ತು ಇವರ ಪಕ್ಷದ ವಿರುದ್ಧ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ಇತ್ತೀಚೆಗಿನ ಬಿಜೆಪಿ ಪಕ್ಷದ ದುರಾಡಳಿತ ಮತ್ತು ಸರ್ಕಾರದ ಸಚಿವರು ನೀಡುತ್ತಿರುವ ದೇಶ ವಿರೋಧಿಯ ಹೇಳಿಕೆಗಳ ವಿರುದ್ಧ, ಕಾಂಗ್ರೆಸ್ ಪಕ್ಷವು ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1940 ರ ಮೊದಲು ಹೋರಾಟ ನಡೆಸಿ ಹೇಗೆ ದೇಶವನ್ನು ಸ್ವಾತಂತ್ರವನ್ನಾಗಿಸದರೋ ಅದೇ ರೀತಿಯಲ್ಲಿ ಮತ್ತೆ ದೇಶ ಮತ್ತು ರಾಜ್ಯದಲ್ಲಿ ಪ್ರತಿಭಟನೆ, ಹೋರಾಟ ನಡೆಸುವ ಪ್ರಸಂಗ ಬಂದೊದಗಿದೆ. ಸ್ವಾತಂತ್ರ್ಯ ನಂತರ ದೇಶಕ್ಕೆ ಒಂದು ರಾಷ್ಟ್ರಧ್ವಜ ಬೇಕೆಂದು ಸಂವಿಧಾನಾತ್ಮಕವಾಗಿ, ದೇಶದ ಸರ್ವ ಧರ್ಮಗಳ ಸಂಕೇತವಾಗಿ ರಾಷ್ಟ್ರಧ್ವಜವನ್ನ ಎಲ್ಲಾ ಗಣ್ಯಮಾನ್ಯರ ಸಮ್ಮುಖದಲ್ಲಿ ಸರ್ವ ಧರ್ಮಗಳ ಸಂಕೇತವಾಗಿ ಕೇಸರಿ ಬಿಳಿ ಹಸಿರು ಬಣ್ಣದ ಮದ್ಯದಲ್ಲಿ ಅಶೋಕ ಚಕ್ರದ ಬಾವುಟವನ್ನು ನಮ್ಮ ದೇಶದ ದ್ವಜವೆಂದು ಅಧಿಕೃತವಾಗಿ ಒಪ್ಪಿಗೆ ಸೂಚಿಸುವುದರ ಮೂಲಕ ರಾಷ್ಟ್ರ ಧ್ವಜವನ್ನು ದೇಶದ ಎಲ್ಲೆಡೆ ಹಾರಿಸಲಾಯಿತು.
ಆದರೀಗ ಬಿಜೆಪಿ ಪಕ್ಷದ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ ರವರು, ರಾಷ್ಟ್ರ ಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ಹಾರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇಂತಹ ದೇಶ ದ್ರೋಹಿ ಹೇಳಿಕೆ ನೀಡಿರುವ ಸಚಿವರನ್ನ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ತಮ್ಮ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ನಾಗರಾಜ್ ಮಾತನಾಡಿ, ಬಿಜೆಪಿ ಪಕ್ಷದವರು ಇನ್ನೂ ಕೆಲವೇ ದಿನಗಳಲ್ಲಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಬರಲಿದ್ದು, ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದೆ ಇರುವುದರಿಂದ ಇದನ್ನು ರಾಜ್ಯದ ಜನತೆಯಿಂದ ಮರೆಮಾಚಿಸಲು ಹಿಜಾಬ್ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದಾರೆ.
ಮುಸ್ಲಿಂ ಜನಾಂಗದವರು ಹುಟ್ಟಿನಿಂದಲೂ ತಮ್ಮ ಮನೆಯಲ್ಲಾಗಲೀ ಹೊರಗಡೆ ಹೋಗುವಾಗಾಗಲೀ ಹಿಜಾಬ್ ಧರಿಸುವುದು ಸರ್ವೇ ಸಾಮಾನ್ಯವಾಗಿದೆ. ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯ ವರೆಗೆ ಯಾವುದೇ ಒಬ್ಬ ವಿದ್ಯಾವಂತ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡಿಸುವ, ಅಥವಾ ದೇಶದ ಅಭಿವೃದ್ಧಿ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗದೆ, ದೇಶದಲ್ಲಿ ನಿರುದ್ಯೋಗ ಸೃಷ್ಟಿಸುವುದರ ಜೊತೆಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಬಿ.ಜಿ.ನಾಗರಾಜ್, ಎಂ.ಪಿ.ಸುರೇಶ್, ಅಶ್ವಿನಿ ಕುಮಾರ್, ಚಂದ್ರಮೌಳಿ ಗೌಡ, ಬಿ.ಪಿ.ರಾಮಚಂದ್ರ ಬಂಡಿ, ಈಶ್ವರಪ್ಪ ಗೌಡ, ಸಣ್ಣಕ್ಕಿ ಮಂಜು, ಸಾಮಾಜಿಕ ಜಾಲ ತಾಣ ಚೇತನ್ ದಾಸ್ ಹೊಸಮನೆ ಹಾಗೂ ಇನ್ನಿತರ ಮುಖಂಡರುಗಳು ಇದ್ದರು.