ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಮೇಲಿನ ಕೆರೆಹಳ್ಳಿಯ ಪ್ರಗತಿಪರ ಕೃಷಿಕ ಟೀಕಪ್ಪ ಗೌಡರಿಗೆ ರಾಜ್ಯಮಟ್ಟದ “ಅನ್ನದಾತ” ಎಂಬ ಪ್ರಶಸ್ತಿಯು ಒಲಿದು ಬಂದಿದೆ.
ಭಾನುವಾರ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ “ಕನ್ನಡ ನುಡಿ ವೈಭವ”-೨೦೨೨ ಎಂಬ ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಆಗಾಧ ಸಾಧನೆಗೈದಿರುವ ಮಲೆನಾಡಿನ ಹೆಮ್ಮೆಯ ಪ್ರಗತಿಪರ ಕೃಷಿಕ ಕೆ ವಿ ಟೀಕಪ್ಪಗೌಡರಿಗೆ “ಅನ್ನದಾತ” ಎಂಬ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಗವಿಸಿದ್ದೇಶ್ವರ ಮಠದ ಹಿರಿಶಾಂತವೀರ ಮಹಾಸ್ವಾಮಿಗಳು,ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರಾದ ಮಧುನಾಯ್ಕ್ ಲಮಾಣಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯ ಕೆ ವಿ ಟೀಕಪ್ಪಗೌಡರು ನಾಟಿ ಯಂತ್ರವನ್ನು ಈ ಭಾಗದಲ್ಲಿ ಮೊದಲು ಪರಿಚಯಿಸಿದವರು ಮೊದ ಮೊದಲು ಇವರನ್ನು ನೋಡಿ ನಕ್ಕವರೇ ಹೆಚ್ಚು.ನಂತರ ಅದರ ಲಾಭದ ಅರಿವಾದ ಮೇಲೆ ಮೂಗಿನ ಮೇಲೆ ಬೆರಳಿಡದವರೇ ಇಲ್ಲ.
ಕೈಯಿಂದ ನಾಟಿ ಮಾಡುವ ಪದ್ಧತಿಯೂ ಭತ್ತದಲ್ಲಿ ಇತ್ತೀಚಿನವರೆಗೆ ನಡೆದುಕೊಂಡು ಬಂದಿರುವುದು ಸಾಂಪ್ರದಾಯಿಕ ಪದ್ಧತಿ. ಇಂದು ಕಾಲ ಬದಲಾಗಿದೆ ಕೃಷಿಯು ಯಾಂತ್ರಿಕರಣದತ್ತ ಸಾಗುತ್ತಿರುವುದು ಕೂಲಿಗಾರರ ಮೇಲಿನ ಅವಲಂಬನೆ ಕಡಿಮೆ ಮಾಡುವುದರ ಜೊತೆಗೆ ಬೇಸಾಯದ ಖರ್ಚನ್ನು ಕಡಿಮೆ ಮಾಡಿ ಆಹಾರ ಉತ್ಪಾದನೆಯಲ್ಲಿ ಗಣನೀಯವಾಗಿ ಬದಲಾವಣೆ ಮಾಡಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ನಾಟಿ ಮಾಡಲು ಕೂಡಾ ಈಗ ಸರಳವಾದ ಯಂತ್ರ ಬಂದಿದೆ. ಏಕಕಾಲಕ್ಕೆ ನಾಲ್ಕು ಸಾಲುಗಳಲ್ಲಿ ನಾಟಿ ಮಾಡುತ್ತದೆ.ಕ್ರಮಬದ್ಧ ರೀತಿಯಲ್ಲಿ ಬತ್ತದ ಸಸಿಗಳನ್ನು ಬೆಳೆಸಿ ಕೊಟ್ಟರೆ ಸಾಕು ನಾಟಿ ಯಂತ್ರವು 2ಗಂಟೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಕೆಲಸವನ್ನು ಮಾಡಿ ಮುಗಿಸುತ್ತದೆ. ನಾಟಿ ಯಂತ್ರ ಈಗಾಗಲೇ ರೈತರಿಗೆ ಚಿರಪರಿಚಿತವಾಗಿದೆ. ನಾಟಿ ಕಾರ್ಮಿಕರ ಕೊರತೆಯನ್ನು ಈ ಯಂತ್ರ ನೀಗಿಸಿದೆ.ಯಾಂತ್ರೀಕೃತ ಬೇಸಾಯ ಪದ್ದತಿಯಲ್ಲಿ ಸಸಿಗಳ ತಯಾರಿ ಅತ್ಯಂತ ಮುಖ್ಯವಾದುದು. ಸಾಂಪ್ರಾದಾಯಿಕ ಕೃಷಿ ಪದ್ದತಿಯಲ್ಲಿ ನೇಜಿ ತಯಾರಿಸಿದಂತಲ್ಲ. ಈ ನಾಟಿ ಯಂತ್ರದ ಬಳಕೆ ಮಾಡುವುದರಿಂದ ಸಸಿ ಮಡಿಗಳನ್ನು ಮಾಡಿ ಅಲ್ಲಿ ನೇಜಿ ತಯಾರಿಸಿಕೊಂಡಿರಬೇಕು. ಒಂದು ಎಕರೆ ಸಸಿಮಡಿ ಬೆಳೆಸಲು 40 ಅಡಿ ಉದ್ದ 4 ಅಡಿ ಅಗಲ ಜಾಗ ಸಾಕು ಮನೆಮುಂದಿನ ಕಾಂಕ್ರೇಟಿಕೃತ ಸ್ಥಳ, ಮಣ್ಣಿನಲ್ಲಿ ಸಹ ಬೆಳೆಸಬಹುದು ಎನ್ನುತ್ತಾರೆ ಟೀಕಪ್ಪ ಗೌಡರು.