ಕಾಲೇಜು ಆವರಣದಲ್ಲಿ ಹಿಜಾಬ್, ಕೇಸರಿ ಶಾಲು ನಡೆಯಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಏನೇನೋ ವೇಷ ಧರಿಸಿಕೊಂಡು ಬರುತ್ತೇವೆ, ನನ್ನ ಧರ್ಮ ಇದು, ನನ್ನ ಧರ್ಮ ಅದು ಎಂದು ಹೇಳಿದರೆ ಆಗಲ್ಲ. ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವುದು ಕಾಲೇಜು ಆವರಣದಲ್ಲಿ ನಡೆಯವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕಾಲೇಜು ಆಡಳಿತ ನಿರ್ಧರಿಸಿರುವ ಸಮವಸ್ತ್ರವನ್ನೇ ಕಾಲೇಜಿನಲ್ಲಿ ಧರಿಸಬೇಕು. ಇದನ್ನು ಕಡ್ಡಾಯ ಮಾಡಿ ಶಿಕ್ಷಣ ಇಲಾಖೆ ನಿನ್ನೆ ಆದೇಶ ಹೊರಡಿಸಿದೆ. ಈ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ಏನೇನೋ ವೇಷ ಧರಿಸಿಕೊಂಡು ಬರುತ್ತೇವೆ, ನನ್ನ ಧರ್ಮ ಇದು, ನನ್ನ ಧರ್ಮ ಅದು ಎಂದು ಹೇಳಿದರೆ ಆಗಲ್ಲ. ಧರ್ಮವನ್ನು ಮೀರಿ ಭಾರತ ಮಾತೆಯ ಮಕ್ಕಳು ನಾವೆಲ್ಲ ಒಂದೇ ಎಂಬ ಭಾವನೆ ನಿರ್ಮಾಣವಾಗಬೇಕು. ಇಂಥ ಸಂಸ್ಕಾರ ಸಿಗುವ ಒಂದೇ ಒಂದು ವೇದಿಕೆ ಅಂದರೆ ಅದು ಶಾಲಾ- ಕಾಲೇಜುಗಳು. ಯೂನಿಫಾರಂ ಸಮಾನತೆಯ ಸಂಕೇತ ಶಾಲಾ ಕಾಲೇಜುಗಳಲ್ಲಿ ಸಮಾನತೆ ಸಾರುವ ಕೆಲಸ ಆಗಬೇಕು ಎಂದು ತಿಳಿಸಿದರು.
ಹಿಜಾಬ್ ಬಗ್ಗೆ ಯಾವಾಗಲೂ ಇಲ್ಲದಿರುವ ಒಲವು ಈಗ ಬಂದಿದೆ. ಕಡ್ಡಾಯವಾಗಿ ನಾವು ಹಿಜಾಬ್ ಧರಿಸಿಬರುತ್ತೇವೆ. ಇಲ್ಲದಿದ್ದರೆ ಕಾಲೇಜು ಬಿಡುತ್ತೇವೆ ಎನ್ನುತ್ತಿದ್ದಾರೆ. ಯಾವಾಗಲೂ ಮಕ್ಕಳು ಹೀಗೆ ಹೇಳುತ್ತಿರಲಿಲ್ಲ. ಇದರ ಹಿಂದೆ ಯಾವುದೋ ಕಾಣದ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಬರುತ್ತಿದೆ. ಪೊಲೀಸ್ ಇಲಾಖೆಗೆ ನಿರ್ದೇಶನ ಹೋಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ನಿರ್ದೇಶನ ಹೋಗಿದೆ ಎಂದು ಮಾಹಿತಿ ನೀಡಿದರು.
ಕಾಲೇಜುಗಳ ಆಡಳಿತ ಮಂಡಳಿಗೆ ಎಲ್ಲ ರೀತಿಯ ಪೊಲೀಸ್ ರಕ್ಷಣೆ ನೀಡುವಂತೆ ಸೂಚಿಸಿದ್ದೇನೆ. ಕೆಲ ತಿಂಗಳಲ್ಲೇ ಪರೀಕ್ಷೆ ಆರಂಭವಾಗಲಿದೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಮಕ್ಕಳನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದು ಗೃಹ ಸಚಿವರು ಮನವಿ ಮಾಡಿದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇👇

Leave a Reply

Your email address will not be published. Required fields are marked *