Headlines

ಕರ್ತವ್ಯ ವೇಳೆ ಕುಸಿದು ಬಿದ್ದ ಶಿವಮೊಗ್ಗದ ಸ್ಟಾಫ್‌ ನರ್ಸ್‌ ಸಾವು : ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

ಶಿವಮೊಗ್ಗ : ಮೆದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ಸ್ಟಾಫ್‌ ನರ್ಸ್‌ ಟಿ.ಕೆ. ಗಾನವಿ (22) ಅವರ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ. ಗಾನವಿ ಅವರು ಕರ್ತವ್ಯದ ವೇಳೆ ಕುಸಿದು ಬಿದ್ದಿದ್ದರು.
ಕೂಡಲೇ ಅವರನ್ನು ಬೆಂಗಳೂರಿನ ಗ್ಯಾಸ್ಟೊ್ರೕ ಎಂಟರಾಲಜಿ ಸೈನ್ಸಸ್‌ ಆ್ಯಂಡ್‌ ಆರ್ಗನ್‌ ಟ್ರಾನ್ಸ್‌ಪ್ಲಾಂಟ್‌ ಸಂಸ್ಥೆಗೆ ಕರೆತರಲಾಯಿತು.

ಈ ವೇಳೆ ವೈದ್ಯರು ಮಿದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದರು. ಇದರಿಂದ ಪೋಷಕರು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಾಯಿ ಮತ್ತು ಅಕ್ಕ ಅಂಗಾಂಗ ದಾನಕ್ಕೆ ಸಹಿ ಮಾಡುವ ಮೂಲಕ ಹಲವರಿಗೆ ಮಾದರಿಯಾದರು. ಗಾನವಿ ಅವರಿಂದ ‘ಲಿವರ್‌, ಕಿಡ್ನಿ, ಕಾರ್ನಿಯಾ ಮತ್ತು ಹಾರ್ಟ್‌ ವಾಲ್‌ ದಾನವಾಗಿ ಪಡೆಯಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ನಾಗೇಶ್‌ ತಿಳಿಸಿದ್ದಾರೆ.

ಎನ್​.ಆರ್​.ಪುರ ತಾಲೂಕು ಕಟ್ಟಿನಮನೆ-ಹೊಸಕೊಪ್ಪದ ಕೃಷ್ಣಮೂರ್ತಿ ಮತ್ತು ಲೀಲಾವತಿ ದಂಪತಿ ಪುತ್ರಿ ಗಾನವಿ ಗೌಡ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿದ್ದರು. ಫೆ.8ರಂದು ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಸ್ಪತ್ರೆಯಲ್ಲೇ ಕುಸಿದುಬಿದ್ದ ಗಾನವಿ ಮೇಲೆ ಏಳಲೇ ಇಲ್ಲ. ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಪೆಟ್ಟಾಗಿತ್ತು, ಮಿದುಳಿನ ಶಸ್ತ್ರಚಿಕಿತ್ಸೆ ನಡೆಸಿದರೂ ಯಶಸ್ವಿಯಾಗಿರಲಿಲ್ಲ. ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಹೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಎಲ್ಲವೂ ಅಂದುಕೊಂಡತೆ ಇದ್ದಿದ್ದರೆ ಗಾನವಿ ಸಹೋದರಿಯ ವಿವಾಹ ಫೆ.20ರಂದು ನಡೆಯಬೇಕಿತ್ತು.

ಈಗಾಗಲೇ ‘ಸಕ್ರಾ ಆಸ್ಪತ್ರೆಯ 48 ವರ್ಷದ ವ್ಯಕ್ತಿಗೆ ಯಕೃತ್‌, ಮಣಿಪಾಲ್‌ ಆಸ್ಪತ್ರೆಯ 40 ವರ್ಷದ ಮಹಿಳೆಗೆ ಬಲಭಾಗದ ಮೂತ್ರಪಿಂಡ, ಐಎನ್‌ಯು ಆಸ್ಪತ್ರೆಯ 35 ವರ್ಷದ ಪುರುಷನಿಗೆ ಎಡಭಾಗದ ಮೂತ್ರಪಿಂಡ ಕಸಿ ಮಾಡಲಾಗಿದೆ. ಮಣಿಪಾಲ್‌ ಆಸ್ಪತ್ರೆಗೆ ಹೃದಯ ನಾಳಗಳನ್ನು ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಗೆ ಕಾರ್ನಿಯಾಗಳನ್ನು ಕಳಿಸಿದ್ದು, ಅರ್ಹ ಮೂರು ಮಂದಿಗೆ ಕಸಿ ಮಾಡಲಾಗುವುದು’ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಹೃದಯ ವಿದ್ರಾವಕ ಘಟನೆಯ ನಡುವೆಯೂ ಗಾನವಿ ಕುಟುಂಬದವರು ತೆಗೆದುಕೊಂಡ ನಿರ್ಣಯಕ್ಕೆ ಹ್ಯಾಟ್ಸ್‌ ಆಫ್‌ ಹೇಳಲೇ ಬೇಕು. ಅಂಗಾಂಗ ದಾನ ಪ್ರತಿಜ್ಞೆ ತೆಗೆದುಕೊಳ್ಳುವುದಕ್ಕೆ ಗಾನವಿ ಸ್ಫೂರ್ತಿಯಾಗಿದ್ದಾರೆ. ಇನ್‌ಸ್ಟಿಟ್ಯೂಟ್‌ ಆಫ್‌ ಗ್ಯಾಸ್ಟೊ್ರೕ ಎಂಟರಾಲಜಿ ಮತ್ತು ಆರ್ಗನ್‌ ಟ್ರಾನ್ಸ್‌ಪ್ಲಾಂಟ್‌ನಲ್ಲಿಇದು ಮೊದಲ ಅಂಗ ಹಿಂಪಡೆಯುವಿಕೆಯಾಗಿದೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *