Headlines

ಅಕ್ರಮ ಮರಳು ಮಾಫ಼ಿಯಾದಲ್ಲಿ ಶಾಸಕ ಹರತಾಳು ಹಾಲಪ್ಪ ರವರ ಕೈವಾಡವಿರುವುದು ನೂರಕ್ಕೆ ನೂರರಷ್ಟು ಸತ್ಯ : ಬಿ ಜಿ ನಾಗರಾಜ್

ಹೊಸನಗರ : ಮಾಜಿ ಶಾಸಕರು ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹೊಸನಗರ ತಾಲ್ಲೂಕಿನಲ್ಲಿ ಮರಳು ಮಾಫೀಯ ನಡೆಯುತ್ತಿದೆ ಅದಕ್ಕೆ ಸಾಗರ – ಹೊಸನಗರ ತಾಲ್ಲೂಕಿನ ಹಾಲಿ ಶಾಸಕರಾಗಿರುವ ಹರತಾಳು ಹಾಲಪ್ಪರವರ ಕೈವಾಡವಿದೆ ಎಂದು ಹೇಳಿರುವುದು ಸತ್ಯ ಸಂಗತಿಯಾಗಿದೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ನಾಗರಾಜ್ ಹೇಳಿದರು.

ಇಂದು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಮರಳು ಗಣಿಗಾರಿಕೆ ಮಾಡುವ ಗುತ್ತಿಗೆದಾರರು ಅಥವಾ ಮರಳು ಸಾಗಾಣಿಕೆ ಮಾಡುವ ಲಾರಿ ಮಾಲೀಕರು ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಶಾಸಕರಿಗೆ ನಮ್ಮಿಂದ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ನಡೆದಿಲ್ಲ ಇದರಲ್ಲಿ ಶಾಸಕರ ಹಸ್ತಕ್ಷೇಪವಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಹಾಗಾದರೆ ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿ ನಿರಂತರವಾಗಿ ಮರಳು ಮಾಫಿಯಾ ನಡೆಯುತ್ತಿದಿಯೇ, ಕಂದಾಯ ಇಲಾಖೆ ಅರಣ್ಯ ಇಲಾಖೆ ಪೋಲೀಸ್ ಇಲಾಖೆ ಮೈಸ್ ಅಂಡ್ ಜಿಯಾಲಜಿಕಲ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಮತ್ತು ಸರ್ಕಾರವೇ ತಿಳಿಸಿದ ಹಾಗೆ ಅಕ್ರಮ ಮರಳು ಗಣಿಗಾರಿಕೆ ನಡೇಸಬಾರದು ಎಂದು ಕಟ್ಟುನಿಟ್ಟಾಗಿ ನಿಬಂಧನೆಗಳನ್ನು ಹೊರಡಿಸಿದೆ. ಆದರೂ ತಾಲ್ಲೂಕಿನ ಸುತ್ತಾ, ಸೊನಲೆ ಮತ್ತು ಹಾಲಗೆರೆ ಆಸುಪಾಸಿನಲ್ಲಿ ನಿರಂತರವಾಗಿ ಮರಳು ತೆಗೆದು ಶಿವಮೊಗ್ಗ,ಸಾಗರ, ಶಿಕಾರಿಪುರ ಸೇರಿದಂತೆ ವಿವಿಧ ತಾಲ್ಲೂಕುಗಳಿಗೆ ಮರಳು ಸಾಗಾಣಿಕೆ ಮಾಡುವ ಮೂಲಕ ದೊಡ್ಡ ಮಾಫಿಯಾ ನಡೆಯುತ್ತಿದೆ. ಇದಕ್ಕೆ ಯಾರು ಕಾರಣ ಯಾವುದೇ ಇಲಾಖೆಯ ಅಧಿಕಾರಿಗಳು ಇದನ್ನು ಗಮನಿಸುತ್ತಾ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದರ ಹಿಂದೆ ಕ್ಷೇತ್ರದ ಕೈವಾಡವಿದೆ ಎಂಬ ಅನುಮಾನಗಳು ಹುಟ್ಟುಹಾಕಿದೆಯಲ್ಲವೇ ಎಂದು ಪ್ರಶ್ನಿಸಿದ ಅವರು ಹಾಗಾಗಿ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ರವರು ಪತ್ರಿಕಾ ಗೋಷ್ಠಿಯಲ್ಲಿ ಹೊಸನಗರ ತಾಲ್ಲೂಕಿನಲ್ಲಿ ಮರಳು ಮಾಫೀಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ ಎಂದರು.

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷದವರೇ ಅಧಿಕಾರದಲ್ಲಿದ್ದಾರೆ. ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆಗೆ ವಿಧಾನಸಭೆಯಲ್ಲಿ ಚರ್ಚೆಗೆ ತಂದು ಚರ್ಚೆ ನಡೆಸಿ ಮರಳು ಸಾಗಾಣಿಕೆ ಮಾಡುವ ವಿಧಾನ ರೀತಿ ನೀತಿಗಳನ್ನು ಜಾರಿಗೆ ತಂದು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮನೆ ಮಠಗಳನ್ನು ನಿರ್ಮಾಣ ಮಾಡಲು, ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತಹಾ ಕಾನೂನು ಕ್ರಮ ಜರುಗಿಸಬಹುದಲ್ಲದೇ ಸರ್ಕಾರಕ್ಕೆ ಆದಾಯವನ್ನೂ ಕೂಡ ಬರುವಂತೆ ಮಾಡಲು ಅವಕಾಶ ದೊರೆಯುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದರು.

ಮರಳು ಮಾಫಿಯಾ ಒಂದು ರೀತಿಯಲ್ಲಿ ಕಣ್ಣಾಮುಚ್ಚಾಲೆ ಆಟ ಪ್ರದರ್ಶಿಸಿದಂತಾಗುತ್ತಿದೆ. ಯಾವುದೇ ಇಲಾಖೆಯ ಅಧಿಕಾರಿಗಳು  ಯಾರಾದರೂ ಅವರವರ ಇಲಾಖೆಗೆ ಹೋಗಿ ಮಾಹಿತಿ ನೀಡಿ ಒತ್ತಡ ಹೇರಿದರೆ ಮಾತ್ರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಲಾರಿಯಾಗಲಿ ಸ್ಟಾಕ್ ಮಾಡಿರುವ ಮರಳಾಗಲೀ ಅಥವಾ ಇನ್ಯಾವುದೇ ವಸ್ತುಗಳಾಗಲೀ ಸೀಜ್ ಮಾಡುವುದು ಸರಿಯಲ್ಲ ಇಲ್ಲವಾದಲ್ಲಿ ಗಣಿಗಾರಿಕೆ ಮಾಡುವವರಿಗಾಗಲೀ, ಗುತ್ತಿಗೆದಾರರಿಗಾಗಲೀ ಅವರಿಷ್ಟದಂತೆ ದಂಧೆ ನಡೆಸಲು ಬಿಟ್ಟುಬಿಡಬೇಕು.

ಈ ಹಿಂದೆ ಮರಳು ಗಣಿಗಾರಿಕೆ ನಡೆಯದೇ ಇದಂತಹಾ ಸಂದರ್ಭದಲ್ಲಿ ಪರವಾನಿಗೆಯನ್ನು ಹೊಂದಿರುವ ಗುತ್ತಿಗೆದಾರರು ಮರಳು ಸಾಗಾಣಿಕೆ ಮಾಡುತ್ತಿದ್ದ ವೇಳೆ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪರವರು ಪರವಾನಿಗೆ ಹೊಂದಿರುವ ಗುತ್ತಿಗೆದಾರರಿಂದ ಮರಳು ಸಾಗಾಣಿಕೆ ಮಾಡುವುದಕ್ಕೆ ಹಣ ನೀಡುವಂತೆ ತಿಳಿಸಿದರು ಅದಕ್ಕೆ ಒಪ್ಪದಿದ್ದಾಗ ಅವರ ವಿರುದ್ಧ ಕ್ರಮ ಕೈಗೊಳ್ಳಲು ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ಅವರ ಪರವಾನಿಗೆಯನ್ನು ರದ್ದುಗೊಳಿಸಲು ಪ್ರಯತ್ನಿಸಿದ್ದರು. ಅದೇರೀತಿಯಲ್ಲೇ ಕ್ಷೇತ್ರದ ಶಾಸಕರಿಗೆ ಹಣ ನೀಡುತ್ತಿರುವವರಿಗೆ ಮರಳು ಗಣಿಗಾರಿಕೆ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ. ಆದ್ದರಿಂದಲೇ ನಮ್ಮ ನಾಯಕರು ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಸಾಕ್ಷಿ ಸಮೇತ ಆರೋಪ ಮಾಡಿರುವುದು ಸರಿ ಇದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಎರಗಿ ಉಮೇಶ್,ಅಶ್ವಿನ್ ಕುಮಾರ್, ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ , ನಗರಾಧ್ಯಕ್ಷ ಗುರುರಾಜ್, ಮುಖಂಡರಾದ ಸಣ್ಣಕ್ಕಿ ಮಂಜು, ಬ್ರಹ್ಮೇಶ್ವರ ಸುದೀಪ್ ಗೌಡ , ಚೇತನ್ ದಾಸ್ ಇನ್ನಿತರರಿದ್ದರು.



ವರದಿ : ಪುಷ್ಪಾ ಜಾಧವ್ ಹೊಸನಗರ

Leave a Reply

Your email address will not be published. Required fields are marked *