ಶಿವಮೊಗ್ಗ : ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಿರುವ ಬೆಂಗಳೂರಿನ ಕಠಿಣ ನಿಯಮಗಳು ಕೋವಿಡ್ ಕಡಿಮೆ ಇರುವ ಇತರೆ ಜಿಲ್ಲೆಗಳಿಗೆ ಬೇಡ ಎಂದು ಸಿಎಂಗೆ ಮನವಿ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿ ಸಂಖ್ಯೆ ಹೆಚ್ಚಿದೆ. ಆದರೆ, ಇತರೆ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ ಎರಡು, ಐದು ಹೆಚ್ಚಿದ್ರೆ ಹತ್ತು ಇರಬಹುದು. ಬೆಂಗಳೂರಿನಲ್ಲಿ ಕೊರೊನಾ ಕಂಟ್ರೋಲ್ ಮಾಡುವುದು ಎಲ್ಲರ ಜವಾಬ್ದಾರಿ ಇದೆ. ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಇದೆ ಅಂತಾ ಇತರೆ ಕಡೆ ಕಠಿಣ ನಿಮಯ ಜಾರಿ ಎಷ್ಟು ಸರಿ ಅಂತಾ ನನಗೆ ಜನ ಪ್ರಶ್ನೆ ಮಾಡ್ತಾ ಇದ್ದಾರೆ ಎಂದರು.
ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಜನ ಮಾಸ್ಕ್, ಸ್ಯಾನಿಟೈಜರ್ ಹಾಗೂ ಅಂತರ ಕಾಪಾಡಿಕೊಂಡು ಇದ್ದಾರೆ. ಇಲ್ಲಿ ಸಮಸ್ಯೆ ಇಲ್ಲ. ಆದರೆ, ಇಲ್ಲೂ ಸಹ ಅಂತಹ ಕ್ರಮ ತೆಗೆದುಕೊಂಡರೆ ಹೇಗೆ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ. ಈ ಕುರಿತು ನಾನು ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಕೇಳುತ್ತೇನೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಕಠಿಣ ನಿಮಯ ಜಾರಿಯ ಜೊತೆಗೆ ಗಡಿ ಜಿಲ್ಲೆಯಲ್ಲೂ ಕ್ರಮಕ್ಕೆ ಸೂಚಿಸುತ್ತೇನೆ. ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಫೋನ್ ಮಾಡಿ ಕೇಳುತ್ತಿದ್ದಾರೆ. ನಾವು ಖರೀದಿಗೆ ಬೆಂಗಳೂರಿಗೆ ಹೋಗಲ್ಲ. ಇಲ್ಲೇ ವ್ಯಾಪಾರ ಮಾಡುತ್ತಿದ್ದೀವಿ ಅಂತಾ ಹೇಳ್ತಾ ಇದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಸಹ ಮನವಿ ಮಾಡ್ತಾ ಇದ್ದು, ಇದರ ಬಗ್ಗೆಯೂ ಸಚಿವ ಸಂಪುಟದಲ್ಲಿ ಹೇಳುತ್ತೇನೆ ಎಂದು ವಿವರಿಸಿದರು.
ಕೊರೊನಾ ಹೇಗೆ ಕಂಟ್ರೋಲ್ ಮಾಡಬೇಕು ಅಂತಾ ನಮಗೆ ತಿಳಿದಿದೆ. ಮಾಧ್ಯಮದಲ್ಲಿ ಚೀನಾದಲ್ಲಿ ಅನ್ನ ಸಿಗಲ್ಲ ಅಂತಾ ತೋರಿಸಿದ ತಕ್ಷಣ ನಮ್ಮಲ್ಲೂ ಹಾಗೆ ಆಗುತ್ತದೆ ಎಂದು ಜನ ಗಾಬರಿಯಾಗುತ್ತಾರೆ. ಆದರೆ, ಇಲ್ಲಿನ ಸನ್ನಿವೇಶ ಬೇರೆ ಇದೆ ಎಂದು ಸಚಿವ ಈಶ್ವರಪ್ಪ ಹೇಳಿದರು.