ಸರಕಾರಿ ಸೇವೆಗಳನ್ನು ಪಡೆಯಲು ಗ್ರಾಮೀಣ ಭಾಗದ ಜನರು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಹೋಗುವುದನ್ನು ತಪ್ಪಿಸಲು ಗ್ರಾಮಗಳ ಮಟ್ಟದಲ್ಲೇ ‘ಗ್ರಾಮ ಒನ್’ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು,ಇದರ ಅಂಗವಾಗಿ ರಿಪ್ಪನ್ ಪೇಟೆ ಶಿವಮೊಗ್ಗ ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆಯ ಮುಂಭಾಗ ಗ್ರಾಮ ಒನ್ ಕೇಂದ್ರವನ್ನು ಗ್ರಾಪಂ ಅಧ್ಯಕ್ಷರಾದ ಮಂಜುಳಾ ಕೆ ರಾವ್ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲು ಮುಂದಾಗಿರುವ ರಾಜ್ಯ ಸರಕಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ನಂತರ ಮಾತನಾಡಿದ ಉಪ ತಹಶೀಲ್ದಾರ್ ಹುಚ್ಚರಾಯಪ್ಪ ಈ ಕೇಂದ್ರವನ್ನು ಉಧ್ಘಾಟಿಸಲು ಶಾಸಕರು ಬರಬೇಕಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ ಆವರ ಅನುಪಸ್ಥಿತಿಯಲ್ಲಿ ಗ್ರಾಪಂ ಅಧ್ಯಕ್ಷರಿಂದ ಈ ಕೇಂದ್ರ ಉಧ್ಘಾಟಿಸಲಾಯಿತು.ಸರಕಾರಿ ಸೇವೆಗಳನ್ನು ಪಡೆಯಲು ಗ್ರಾಮೀಣ ಭಾಗದ ಜನರು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಹೋಗಿಬರಬೇಕಾದ ಪರಿಸ್ಥಿತಿಯಿದೆ. ಆ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗ್ರಾಮ ಒನ್ ಕೇಂದ್ರ ತೆರೆಯುತ್ತಿದ್ದು, ನೂರಾರು ಸೇವೆಗಳು ಜನರಿಗೆ ಗ್ರಾಮಗಳಲ್ಲಿಯೇ ಲಭ್ಯವಾಗಲಿವೆ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಪ್ರವೀಣ್ ಮಾತನಾಡಿ ಸರಕಾರಿ ಸೇವೆಗಳನ್ನು ಪಡೆಯಲು ಸರಕಾರಿ ಕಚೇರಿಗಳಿಗೆ ಪ್ರಯಾಣಿಸುವ ಸಮಯ ಮತ್ತು ಹಣ ಖರ್ಚು ಮಾಡುವುದನ್ನು ಈ ಕೇಂದ್ರಗಳು ತಪ್ಪಿಸಲಿದ್ದು, ಸರತಿ ಸಾಲಿನಲ್ಲಿ ಸೇವೆಗಳಿಗಾಗಿ ಕಾಯುವುದನ್ನು ತಪ್ಪಿಸುತ್ತದೆ. ಇನ್ನು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸರಕಾರಿ ಸೇವೆಗಳು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶವನ್ನು ಕೇಂದ್ರಗಳು ಹೊಂದಿವೆ. ಅದರಲ್ಲಿಯೂ ಪ್ರಮುಖವಾಗಿ ನಾಗರಿಕರ ಅನುಕೂಲಕ್ಕಾಗಿ ಗ್ರಾಮ ಒನ್ ಕೇಂದ್ರಗಳು ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ತೆರೆದಿರುವುದರಿಂದ ಜನರು ಬಿಡುವಿನ ಸಮಯದಲ್ಲಿ ಕೇಂದ್ರಗಳಿಗೆ ಹೋಗಿ ತಮಗೆ ಬೇಕಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಗ್ರಾಮ ಒನ್ ಕೇಂದ್ರಗಳು ಜನರಿಗೆ ನೂರಾರು ಸರಕಾರಿ ಸೇವೆಗಳನ್ನು ಒದಗಿಸಿದೆ ಎಂದರು.
ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಆಸೀಫ಼್ ಭಾಷಾಸಾಬ್,ಪಿ ರಮೇಶ್,ವನಮಾಲ, ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಆರ್ ರಾಘವೇಂದ್ರ, ಮುಖಂಡರಾದ ಟಿ ಆರ್ ಕೃಷ್ಣಪ್ಪ,ಅಮೀರ್ ಹಂಜಾ, ಕಂದಾಯ ಇಲಾಖೆಯ ಇನಾಯತ್ ಖಾನ್, ರೇಣುಕಯ್ಯ,ಜಾಕೀರ್ ಹುಸೇನ್,ಗ್ರಾಪಂ ಸಿಬ್ಬಂಧಿಗಳಾದ ನಾಗೇಶ್,ರಾಜೇಶ್ ಹಾಗೂ ಗ್ರಾಮ ಒನ್ ಕೇಂದ್ರ ನಿರ್ವಾಹಕ ಸನತ್ ಶೆಟ್ಟಿ ಹಾಗೂ ಇನ್ನಿತರರಿದ್ದರು.
ಗ್ರಾಮ ಒನ್‌ನಲ್ಲಿ ಸಿಗುವ ಸೌಲಭ್ಯ
- ಸೇವಾ ಸಿಂಧುವಿನಲ್ಲಿ ಬರುವ ಎಲ್ಲ750 ಸೇವೆಗಳು
- ಸಕಾಲ ಸೇವೆಗಳು
- ಮಾಹಿತಿ ಹಕ್ಕು ಸೇವೆಗಳು
- ಮುಖ್ಯಮಂತ್ರಿಗಳ ಪರಿಹಾರ ನಿಧಿ
- ಸಣ್ಣ ಬ್ಯಾಂಕಿಂಗ್ ಸೇವೆಗಳು
ಗ್ರಾಮ ಒನ್ ಅನುಕೂಲಗಳೇನು?
- ಜನರ ಸಮಯ ಹಾಗೂ ಹಣ ಉಳಿಸುತ್ತದೆ
- ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುತ್ತದೆ
- ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ
- ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಸೇವೆ ನೀಡುತ್ತವೆ