ತೀರ್ಥಹಳ್ಳಿಯ ಹಿರಿಯ ಪತ್ರಕರ್ತ ಲಿಯೋ ಅರೋಜರವರನ್ನು ತೀರ್ಥಹಳ್ಳಿಯ ಪ್ರತಿಷ್ಠಿತ ಸಮಾಜದ ಮುಖಂಡರೆಲ್ಲಾ ಸೇರಿ ಕುಶಾವತಿ ಸೇತುವೆ ಬಳಿ ಸುಮಾರು ನಾಲ್ಕುಗಂಟೆಯ ವರೆಗೆ ಕೂರಿಸಿಕೊಂಡು ಮಾನಸಿಕ ಹಿಂಸೆ ನೀಡಿರುವ ಘಟನೆ ನಡೆದಿದೆ.
ಗೃಹ ಸಚಿವರ ಕ್ಷೇತ್ರದಲ್ಲಿ ಪತ್ರಕರ್ತನೋರ್ವನಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಜ್ಜನರ ನಾಡಾಗಿದ್ದ ತೀರ್ಥಹಳ್ಳಿ ಮರಳು ಮಾಫಿಯಾದ ಗೂಂಡಾರಾಜ್ಯವಾಗಿ ನಿರ್ಮಾಣವಾಗಿ ಬಿಟ್ಟಿತೇ ಎಂಬ ಆತಂಕ ಎದುರಾಗಿದೆ.
ಯಾವುದೇ ನದಿ ಸೇತುವೆಗಳ ಕೆಳಗಡೆ ಮರಳು ತೆಗೆಯದಂತೆ ಸುಪ್ರೀಕೋರ್ಟ್ ಆದೇಶವಿದೆ. ಆದರೆ ಕುಶಾವತಿ ಸೇತುವೆ ಕೆಳಗೆ ತೀರ್ಥಹಳ್ಳಿಯ ಪ್ರತಿಷ್ಠಿತ ಸಮಾಜದ ಮುಖಂಡರು ಸೇರಿ ಇಂದು ಅಕ್ರಮ ಮರಳು ಹೊಡೆದಿದ್ದಾರೆ.
ಈ ಅಕ್ರಮ ಮರಳು ತೆಗೆದಿರುವುದಕ್ಕೆ ಜಿಲ್ಲಾಡಳಿತ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು. ಆದರೆ ಇಡೀ ಜಿಲ್ಲಾಡಳಿತ ನಿದ್ರೆಗೆ ಜಾರಿದೆ.
ಜನ ಸಾಮಾನ್ಯರ ಮೇಲೆ ಗಧಾಪ್ರಹಾರ ನಡೆಸುವ ಇಲಾಖೆಗಳು ಸಮಾಜದ ನಾಯಕರ ವಿರುದ್ಧ ಗಪ್ ಚುಪ್ ಆಗಿದೆ.
ಪ್ರತಿಷ್ಠಿತ ಸಂಘ ಸಂಸ್ಥೆಯ ಮುಖಂಡರು 20 ಲಾರಿ ಮತ್ತು 20 ಜೆಸಿಬಿಯನ್ನು ತರಿಸಿ ನೂರಾರು ಲೋಡು ಮರಳನ್ನು ಸಾಗಿಸಿದ್ದಾರೆ.
ವಿಷಯ ತಿಳಿದ ಪತ್ರಕರ್ತ ಲಿಯೋ ಅರೋಜ ಈ ಬಗ್ಗೆ ಫೋಟೊ ತೆಗೆದುಕೊಂಡು ಹತ್ತಿರದಲ್ಲಿಯೇ ಇರುವ ಮನೆಗೆ ತೆರಳಿದ್ದಾರೆ. ಪತ್ರಕರ್ತ ಲಿಯೋ ಅರೋಜರನ್ನು ಪರಿಚಯಸ್ಥರ ಮೂಲಕ ಸ್ಥಳಕ್ಕೆ ಕರೆಯಿಸಿಕೊಂಡು ಸೇತುವೆಯ ಕೆಳಗೆ ಕೂರಿಸಿಕೊಂಡು ಪ್ರತಿಷ್ಠಿತ ಸಮಾಜದ ಮುಖಂಡರು ಪೌರುಷ ತೋರಿದ್ದಾರೆ.
ಸುಮಾರು ಬೆಳಿಗ್ಗೆ 10 ಗಂಟೆಗೆ ಲಿಯೋ ಅರೋಜರವರ ಮನೆಗೆ ಬಂದ ಪರಿಚಯವಿದ್ದ ವ್ಯಕ್ತಿ ನಿಮ್ಮೊಂದಿಗೆ ಮಾತನಾಡಬೇಕು ಬನ್ನಿ ಎಂದು ಕರೆದುಕೊಂಡು ಹೋಗಿದ್ದಾರೆ. ಹೋದಾಗ ಅವರನ್ನ ಮರಳು ಹೊಡೆಯುವುದು ಮುಗಿಯುವ ವರೆಗೆ ಹೋಗುವ ಹಾಗಿಲ್ಲವೆಂದು ಕೂರಿಸಿಕೊಂಡು ಟಾರ್ಚರ್ ನೀಡಿದ್ದಾರೆ.
ನಂತರ ಇವರ ಮಗ ಎಸ್ಪಿ ಲಕ್ಷ್ಮೀಪ್ರಸಾದ್ ಗೆ ವಿಷಯ ಮುಟ್ಟಿಸಿದ ಮೇಲೆ ಮಧ್ಯಾಹ್ನ 2 ಗಂಟೆಗೆ ತೀರ್ಥಹಳ್ಳಿಯ ಸಿಪಿಐ ಸ್ಥಳಕ್ಕೆ ಧಾವಿಸಿ ಅರೋಜರನ್ನ ಬಿಡುಗಡೆ ಮಾಡಿದ್ದಾರೆ. ಒಂದು ಪ್ರತಿಷ್ಠಿತ ಸಮಾಜದ ಹೆಸರಿನಲ್ಲಿ ತೀರ್ಥಹಳ್ಳಿಯಲ್ಲಿ ಗೂಂಡಾಗಿರಿ ನಡೆದಿದೆ. ಆದರೂ ಅಕ್ರಮ ಮರಳುಗಾರಿಕೆ ನಡೆದಿದೆ.