Headlines

ಆರಗ ಜ್ಞಾನೇಂದ್ರ ಅವರಿಗೆ ತಾಕತ್ತಿದ್ದರೆ, ನಂದಿತಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ : ಕಿಮ್ಮನೆ ಸವಾಲು

ಶಿವಮೊಗ್ಗ : ದೇಶದ ಗೃಹಮಂತ್ರಿ ಅಮಿತ್ ಶಾ ಹಾಗೂ
ರಾಜ್ಯದ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ತಾಕತ್ತಿದ್ದರೆ, ಸಾಮರ್ಥ್ಯ ಇದ್ದರೆ ನಂದಿತಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ. ಆರು ತಿಂಗಳಲ್ಲಿ ಫಲಿತಾಂಶ ಕೊಡಿ. ಇದರಲ್ಲಿ ನನ್ನ ಹಸ್ತಕ್ಷೇಪವೆಗಿರುವುದು ಗುಲಗಂಜಿಯಷ್ಟು ಸಾಬೀತಾದರೆ ನಾನು ಸಾರ್ವಜನಿಕ ಕ್ಷೇತ್ರದಿಂದ ನಿವೃತ್ತಿಯಾಗುತ್ತೇನೆ. ಇಲ್ಲದಿರೆ ರಾಜ್ಯದ ಗೃಹಮಂತ್ರಿಗಳು ತೀರ್ಥಹಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.

ಅವರಿಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ 01-11-2014 ರಿಂದ 2018 ರವರೆಗೆ ಸತತವಾಗಿ ಆರಗ ಜ್ಞಾನೇಂದ್ರ ಕೋಮುಭಾವನೆ ಕೆರಳಿಸುವ ನಂದಿತಾ ಪ್ರಕರಣದ ಬಗೆಗೆ ನನ್ನ ವಿರುದ್ದ ವಿವಿಧ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಅವರ ಬೆಂಬಲಕ್ಕೆ ಬಿಜೆಪಿ ನಿಂತಿತ್ತು. ಚುನಾವಣೆ ಬರುವವರೆಗೂ ನಂದಿತಾ ಪ್ರಕರಣ ಇಟ್ಟುಕೊಂಡು ಪ್ರತಿ ಬಾರೀ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಈಗ ತಾಕತ್ತಿದ್ದರೆ ತನಿಖೆ ಮಾಡಿಸಿ ಎಂದು ಒತ್ತಾಯಿಸಿದರು.

ಗೃಹಮಂತ್ರಿಯಾಗಿ ಕೊರೊನಾ ಕಾನೂನು ಪಾಲಿಸಿ ಎನ್ನುತ್ತಾ ತಮ್ಮೂರಲ್ಲೇ ಸದಾ ಕಾಲಕಳೆಯುವ ಆರಗ ಜ್ಞಾನೇಂದ್ರ ಅವರೇ, ನಿಮ್ಮ ತಾಕತ್ತಿನ ಪ್ರಶ್ನೆ ಇದು. ಸಿಬಿಐ ತನಿಖೆ ನಡೆಸಿ ಆರು ತಿಂಗಳಲ್ಲಿ ಫಲಿತಾಂಶ ಕೊಡಿಸಿ. ಸುಮ್ಮನೆ ಜನರ ಭಾವನೆಗಳನ್ನು ಕೆಡಿಸಿ ಜನರ
ನಿದ್ದೆಗೆಡಿಸಿ ಆಸ್ತಿಪಾಸ್ತಿ ನಷ್ಟ ಮಾಡಿ ನೀವು ಹೋಳಿಗೆ ಊಟ ಮಾಡಿದ್ದೀರಿ. ಇಂತಹ ಸುಳ್ಳುಗಳಿಂದ ಹಣ ಅಧಿಕಾರ ಪಡೆಯುವ ಬದಲು ಸಾರ್ವಜನಿಕ ಕ್ಷೇತ್ರದಿಂದ ಹಿಂದೆ ಸರಿದು ಜನರನ್ನು ಶಾಂತಿ ನೆಮ್ಮದಿಯಿಂದ ಇರಲು ಬಿಡಿ ಎಂದರು.

Leave a Reply

Your email address will not be published. Required fields are marked *