Headlines

ಸಮಾಜದಲ್ಲಿ ಪರಿವರ್ತನೆಯನ್ನು ತಂದ ಕೀರ್ತಿ ಹಾನಗಲ್ ಶಿವಕುಮಾರ ಸ್ವಾಮೀಜಿಗೆ ಸಲ್ಲುತ್ತದೆ : ಬಿ ಎಸ್ ಯಡಿಯೂರಪ್ಪ

ಶಿಕಾರಿಪುರ  : ಸಮಾಜದಲ್ಲಿನ ಮೂಢನಂಬಿಕೆ, ಅಸಮಾನತೆ ತೊಡೆದು ಪರಿವರ್ತನೆ ತಂದವರು ಹಾನಗಲ್ಲ ಶಿವಕುಮಾರ ಶ್ರೀಗಳು ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಶಿಕಾರಿಪುರ ತಾಲೂಕು ಘಟಕದ ವತಿಯಿಂದ ಹಾನಗಲ್ ಶಿವಕುಮಾರ ಸ್ವಾಮಿಗಳ 154ನೇ ಜಯಂತಿ ಕಾರ್ಯಕ್ರಮವನ್ನು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ‌ ಅವರು ಉದ್ಘಾಟಿಸಿ ಮಾತನಾಡಿದರು. ಅಂಧ ಶ್ರದ್ಧೆಯಿಂದ ಬಡವನಾಗಿದ್ದ ಸಮಾಜಕ್ಕೆ ಆಚಾರದ ಅರಿವು, ಶರಣ ಸಂಸ್ಕೃತಿ ನೆಲೆಯಲ್ಲಿ ಪುನಶ್ಚೇತನಗೊಳಿಸಿದ್ದಾರೆ ಎಂದು ಹೇಳಿದರು.

ಶೈಕ್ಷಣಿಕವಾಗಿ ಹಿಂದುಳಿದ ಸಮಾಜದಲ್ಲಿ ಗುಲಾಮಗಿರಿ, ಅನಕ್ಷರತೆಯಯನ್ನು ಗಮನಿಸಿ, ಅಕ್ಷರತೆಯ ಮೂಲಕ ಸಮಾಜ ಸಧೃಡವಾಗುತ್ತದೆ ಎಂಬ ನಂಬಿಕೆಯಿಂದ ರಾಜ್ಯಾದ್ಯಂತ ಹಲವು ಮಠಗಳನ್ನು ಸ್ಥಾಪನೆ ಮಾಡಿದ್ದಾರೆ. ಆ ಮೂಲಕ ಶಿಕ್ಷಣ ನೀಡುವ ಕೆಲಸ ಮಾಡಿದರು.

ದೃಷ್ಟಿವಿಕಲಚೇತನರಾಗಿದ್ದ ಪಂಚಾಕ್ಷರಿ ಗವಾಯಿಗಳಿಗೆ ಅವರು ಗುರುಗಳಾಗಿದ್ದು ವಿಶೇಷವಾಗಿದೆ. ಹರಿದು ಹಂಚಿ ಹೋಗಿದ್ದ ವೀರಶೈವ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ, 1904ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ‌ ಸ್ಥಾಪನೆ ಮಾಡಿದರು. ಅಲ್ಲದೇ, ನಾಡಿನ ಹಲವು ಮಠಗಳಿಗೆ ಮಠಾಧೀಶರನ್ನು ನೀಡಿದ ಕೀರ್ತಿ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದರು.

ಸಮಾಜದಲ್ಲಿ ಮೂಢನಂಬಿಕೆ, ಅಸಮಾನತೆಯನ್ನು ಹೋಗಲಾಡಿಸಿ, ಪರಿವರ್ತನೆಯನ್ನು ತಂದಿದ್ದಾರೆ. ಬದುಕಿನಲ್ಲಿ ಬದಲಾವಣೆ ಬಯಸುವಂತಹ ದುಶ್ಚಟಗಳಿಂದ ದೂರವಾಗಬೇಕು ಅಂತಾ ಗುರುಗಳು ತಿಳಿಸಿದ್ದಾರೆ. ಶ್ರೀಗಳ ಸಂತ ಚಿಂತನೆಗಳನ್ನು ಓದುವ ಮೂಲಕ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಸಾಗೋಣ ಎಂದು ಕರೆ ನೀಡಿದರು.

ಇದಕ್ಕೂ ಮೊದಲು ಸಂಸದ ಬಿ.ವೈ ರಾಘವೇಂದ್ರ ಅವರು ಮಾತನಾಡಿದರು. ಹಾನಗಲ್ ಕುಮಾರಸ್ವಾಮಿಗಳು ಏನು ಇಲ್ಲದ ಸಂದರ್ಭದಲ್ಲಿ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ವೀರಶೈವ ಸಮಾಜದ ಒಳ ಸಮುದಾಯಗಳನ್ನು ಬಿಟ್ಟು ಎಲ್ಲರೂ ಒಂದಾಗಿ ಹೋಗಬೇಕು. ಎಲ್ಲರೊಳಗೂ ನೆರಳು ಕೊಡುವ ಕೆಲಸ ಮಾಡಬೇಕಾಗಿದೆ. ವೀರಶೈವ ಧರ್ಮದ ಯಾವುದೇ ಜಾತಿಗೆ ಸೀಮಿತವಲ್ಲ. ಹಿಂದೂ ಧರ್ಮದ ಅಡಿಯಲ್ಲಿ ನಾವೆಲ್ಲ ಜೀವನವನ್ನು ನಡೆಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ತೊಗರ್ಸಿ ಮಠದ ಚೆನ್ನವೀರ ದೇಶಿಕೇಂದ್ರ ಮಹಾಸ್ವಾಮೀಜಿ, ಶ್ರೀ ವೀರೇಶಾನಂದ ಸರಸ್ವತಿ ಮಹಾಸ್ವಾಮೀಜಿ, ಶಿಕಾರಿಪುರ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಈರೇಶ ಎನ್ ವಿ ಸಾಧನಾ ಅಕಾಡೆಮಿ ಸ್ಥಾಪಕರು ಮಂಜುನಾಥ್ ಮತ್ತು ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *