ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಒತ್ತಡದ ನಡುವೆಯೂ ರೋಚಕವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯವನ್ನು ತಮ್ಮ ಕಾರಿನಲ್ಲಿ ಕುಳಿತು ವೀಕ್ಷಣೆ ಮಾಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದು, ಯಡಿಯೂರಪ್ಪ ಅವರ ಐಪಿಎಲ್ ಕ್ರೇಜ್ ಅಚ್ಚರಿ ಮೂಡಿಸುತ್ತಿದೆ.
ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ದತ್ತಿ ಪ್ರಶಸ್ತಿ ಕಾರ್ಯಕ್ರಮ ಮುಗಿಸಿ ಶಿಕಾರಿಪುರಕ್ಕೆ ತೆರಳುವ ವೇಳೆ ಮಾಜಿ ಮುಖ್ಯಮಂತ್ರಿ ಅವರು ಐಪಿಎಲ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಶ್ರಾಂತಿಗೆ ಮೊರೆ ಹೋಗದೇ ಪಕ್ಷದ ಸಂಘಟನೆಗಾಗಿ ಬಿಎಸ್ವೈ ಜಿಲ್ಲಾ ಪ್ರವಾಸಗಳನ್ನು ಮಾಡುತ್ತಿದ್ದಾರೆ.
ಸಾಕಷ್ಟು ರಾಜಕೀಯ ಒತ್ತಡದ ನಡುವೆಯೂ ಆರ್ಸಿಬಿ ಪಂದ್ಯವನ್ನು ವೀಕ್ಷಿಸಿದ ಯಡಿಯೂರಪ್ಪ ಅವರ ಕ್ರಿಕೆಟ್ ಪ್ರೇಮವನ್ನು ನೋಡಿ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಡೆಲ್ಲಿ ನೀಡಿದ್ದ 165 ರನ್ಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಎಸೆತದಲ್ಲಿ ತಲುಪಿ ರೋಚಕ ಜಯ ಸಾಧಿಸಿತು. ಶ್ರೀಕರ ಭರತ್ ಕೊನೆಯ ಎಸೆತದಲ್ಲಿ ಅಗತ್ಯವಿದ್ದ 5 ರನ್ಗಳನ್ನು ಸಿಕ್ಸರ್ ಮೂಲಕ ತಂದುಕೊಟ್ಟಿದ್ದು, ಆರ್ಸಿಬಿ ಅಭಿಮಾನಿಗಳನ್ನು ಸಂಭ್ರಮದಲ್ಲಿ ತೇಲಾಡುವಂತೆ ಮಾಡಿದೆ.