ರಿಪ್ಪನ್ ಪೇಟೆ: ಸಮೀಪದ ಆಲುವಳ್ಳಿ ಗ್ರಾಮದ ಮನ್ನಾ ಜಂಗಲಿ ಎಂಬಲ್ಲಿ ಬುಧವಾರ ಸಂಜೆ ಬೇಟೆಗಾರರು ಅಕ್ರಮವಾಗಿ ಜಿಂಕೆಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸಂಜೆ 4 ಗಂಟೆಯ ಸಮಯದಲ್ಲಿ ಆಲುವಳ್ಳಿ ಗ್ರಾಮದ ಮನ್ನಾಜಂಗಲಿ ಯ ಜೋಡು ಕೆರೆಯ ಆಸುಪಾಸಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಗಂಡು ಜಿಂಕೆಯನ್ನು ಮೂರು ಜನ ಮಾಂಸ ಭಕ್ಷಣೆಯ ಉದ್ದೇಶಕ್ಕಾಗಿ ಹತ್ಯೆ ಮಾಡಲಾಗಿದೆ. ಖಚಿತ ಮಾಹಿತಿ ಅರಿತ ಅರಣ್ಯ ಇಲಾಖೆಯ ಅಧಿಕಾರಿಗಳು ಎಸಿಎಫ್ ಮಾರ್ಗದರ್ಶನದಂತೆ ದಾಳಿ ನಡೆಸಿ ಜಿಂಕೆಯ ಕಳೆಬರ ಸಹಿತ ಹತ್ಯೆಯಲ್ಲಿ ಭಾಗಿಯಾದ ಸಾಗರ ತಾಲೂಕಿನ ಲಕ್ಕವಳ್ಳಿ ಗ್ರಾಮದ ಪ್ರಶಾಂತ್, ಆದರ್ಶ, ಸಚಿನ್ ರನ್ನು ವಶಕ್ಕೆ ಪಡೆದಿದ್ದಾರೆ.
ಜಿಂಕೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.