ರಿಪ್ಪನ್ ಪೇಟೆ: ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷಗಳು ಕಳೆದಿವೆ ಮೂಲಭೂತ ಸೌಕರ್ಯಕ್ಕೆ ಜನ ಪರದಾಡುವ ಸ್ಥಿತಿ ಇರುವದು ನಮ್ಮ ದೇಶದಲ್ಲಿ ಹೊಸದೇನಲ್ಲ ಇದೇ ರೀತಿ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಮಕ್ಕಿ ಗ್ರಾಮದ ಜನರು ಇದೀಗ ಮೂಲಭೂತ ಸೌಕರ್ಯವಾದ ರಸ್ತೆ ಹಾಗು ಕುಡಿಯುವ ನೀರಿನ ಸೌಕರ್ಯವಿಲ್ಲದೇ ದಿನಾಲು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಗರ ಹೊಸನಗರ ಕ್ಷೇತ್ರದ ಶಾಸಕರಾದ ಹೆಚ್ ಹರತಾಳು ಹಾಲಪ್ಪನವರ ಸ್ವಕ್ಷೇತ್ರವಾದ ಹರತಾಳು ನಿಂದ ಕೂಗಳತೆ ದೂರದ ಬಾಳೂರು ಗ್ರಾಪಂ ವ್ಯಾಪ್ತಿಯ ಕಲ್ಮಕ್ಕಿ ಗ್ರಾಮದಲ್ಲಿ ಜನ ರಸ್ತೆ ವ್ಯವಸ್ಥೆ ಸರಿ ಇಲ್ಲದೆ ಇಂದು ಬಾಳೂರು ಗ್ರಾಪಂ ಪಿಡಿಓ ಹಾಗೂ ಪಂಚಾಯತಿಯ ಸದಸ್ಯರೆಲ್ಲಾರಿಗು ಧಿಕ್ಕಾರ ಕೂಗಿ ನಡು ರಸ್ತೆಯಲ್ಲೇ ಬಾಳೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು,ರೈತರು,ವಯೋವೃದ್ಧರು ಶಾಲಾ~ಕಾಲೇಜು ಮತ್ತು ಇನ್ನಿತರ ಯಾವುದೇ ದೈನಂದಿನ ಚಟುವಟಿಕೆಗಳಿಗೆ ಹೋಗಬೇಕಾದಾಗ ಈ ರಸ್ತೆಯಲ್ಲಿ ಬಿದ್ದು ಗಾಯ ಮಾಡಿಕೊಂಡಿರುವ ಘಟನೆ ಅದೆಷ್ಟೋ ನಡೆದಿದೆ ಹಾಗು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಬರುವ ಆಂಬುಲೆನ್ಸ್ ಹಾಗುಉ ಇನ್ನಿತರ ವಾಹನಗಳು ಊರಿನಿಂದ ಹೊರಗೆ ನಿಲ್ಲಿಸಿ ರೋಗಿಗಳನ್ನು ಹೊತ್ತುಕೊಂಡು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರಾದ ಮಂಜೋಜಿ ರಾವ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಬಾರಿ ಚುನಾವಣಾ ಸಂಧರ್ಭದಲ್ಲಿ ಬರುವ ಜನಪ್ರತಿನಿಧಿಗಳು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಆಶ್ವಾಸನೆ ನೀಡುತ್ತಾರೆಯೇ ಹೊರತು ಗೆದ್ದ ನಂತರ ಯಾವೊಬ್ಬ ಜನಪ್ರತಿನಿಧಿಯು ನಮ್ಮಗ್ರಾಮದ ಕಡೆ ತಲೆ ಹಾಕುವುದಿಲ್ಲ.ಕೆಸರುಗದ್ದೆಯಾಗಿರುವ ಈ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿರುವಾಗ ಕುಡಿಯುವ ನೀರಿಗಾಗಿ ಇದೇ ರಸ್ತೆಯಲ್ಲಿ ಎದ್ದು ಬಿದ್ದು ನೀರು ತರುವಂತಹ ಶೋಚನೀಯ ಪರಿಸ್ಥಿತಿ ನಮ್ಮ ಈ ಕುಗ್ರಾಮಕ್ಕೆ ಬಂದೊದಗಿದೆ.
ಮುಂದಿನ ದಿನಗಳಲ್ಲಿ ರಸ್ತೆಯನ್ನು ಸರಿಪಡಿಸದೇ ಇದ್ದಲ್ಲಿ ಮುಂಬರುವ ಚುನಾವಣಾ ಬಹಿಷ್ಕಾರ ಮಾಡಿ ಉಗ್ರವಾದ ಹೋರಾಟಕ್ಕೆ ಗ್ರಾಮಸ್ಥರು ಮುಂದಾಗುತ್ತೇವೆ ಎಂದು ಕಲ್ಮಕ್ಕಿ,ಕೊರಲುಹಳ್ಳಿ ಗ್ರಾಮಸ್ಥೆ ವಿದ್ಯಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶಿವಾಜಿರಾವ್ ,ಭವಾನಿ,ಶೇಖರಪ್ಪ,ತಿಮ್ಮಪ್ಪ, ಯಶೋಧ, ರವಿ,ರೋಹಿತ್,ಶೇಖರಪ್ಪಗೌಡ,ಸ್ವಾತಿ,ಶೋಭಾ,ರಾಮು,ಶರತ್,ನಾಗರಾಜ್ ಹಾಗು ಇನ್ನಿತರರು ಪಾಲ್ಗೊಂಡಿದ್ದರು.