ರಿಪ್ಪನ್ ಪೇಟೆ: ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆಯಾಗುತ್ತಾರೆ ಎಂಬ ಬಾಲಿಷ ಹೇಳಿಕೆ ನೀಡಿರುವ ದೇಶದ ಗೃಹ ಮಂತ್ರಿ ಅಮಿತ್ ಷಾ ರವರನ್ನು ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ವತಿಯಿಂದ ರಾಷ್ಟ್ರಪತಿಗಳಿಗೆ ಉಪತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಇತ್ತೀಚೆಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಟಿವಿ ಸಂದರ್ಶನವೊಂದರ ವೇಳೆ ಅನಕ್ಷರಸ್ಥ ವ್ಯಕ್ತಿ ದೇಶಕ್ಕೆ ಹೊರೆ. ಆತನಿಗೆ ಸಂವಿಧಾನ ನೀಡಿದ ಹಕ್ಕುಗಳು ತಿಳಿಯುವುದಿಲ್ಲ. ಅಥವಾ ಆತನಿಗೆ ಮಾಡಬೇಕಾದ ಕರ್ತವ್ಯಗಳು ಗೊತ್ತಿರುವುದಿಲ್ಲ. ಅಂತಹ ವ್ಯಕ್ತಿಯು ಉತ್ತಮ ಪ್ರಜೆ ಹೇಗೆ ಆಗುತ್ತಾನೆ ಎಂದಿದ್ದರು.
ಈ ಹೇಳಿಕೆಯನ್ನು ಖಂಡಿಸಿರುವ ಜೆಡಿಎಸ್ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ರವರು ಮಾತನಾಡಿ ಇಂತಹ ಹೇಳಿಕೆ ದೇಶದಲ್ಲಿ ಇರುವ ಅನಕ್ಷರಸ್ತರಿಗೆ ಮಾಡಿದ ಅಗೌರವವಾಗಿದೆ.ಇದೊಂದು ಸಂಪೂರ್ಣವಾದ ಬೇಜವಾಬ್ದಾರಿ ಹೇಳಿಕೆ,ಒಬ್ಬ ದೇಶದ ಗೃಹ ಮಂತ್ರಿಯಾಗಿ ಇಂತಹ ಕೀಳುಮಟ್ಟದ ಹೇಳಿಕೆ ನೀಡಬಾರದು.ಸುಮಾರು 40 ವರ್ಷಗಳ ಹಿಂದೆ ಜನಜೀವನ ಹೇಗಿತ್ತು ಎನ್ನುವುದನ್ನು ಅವರು ತಿಳಿದುಕೊಳ್ಳುವುದು ಸೂಕ್ತ ಹಾಗೇಯೆ ದೇಶ ಕಂಡ ಅತ್ಯುತ್ತಮ ಮುಖ್ಯಮಂತ್ರಿ ದೇವರಾಜ್ ಅರಸ್ ರವರು ರೈತರು ಹಾಗೂ ಅನಕ್ಷರಸ್ಥರು ಈ ದೇಶದ ಜೀವನಾಡಿ ಎಂದಿದ್ದರು.ದೇಶದ ಶೇಕಡಾ 60% ರಷ್ಟು ಅವಿದ್ಯಾವಂತರಿಗೆ ಹೇಳಿದ ಮಾತು ಅತ್ಯಂತ ಕೀಳುಮಟ್ಟದ ಹೇಳಿಕೆಯಾಗಿದೆ ಆದರಿಂದ ಈ ಕೂಡಲೇ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ರವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಮತ್ತು ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಅಮಿತ್ ಷಾ ರವರನ್ನು ವಜಾ ಮಾಡಬೇಕೆಂದು ಮನವಿ ಮಾಡಿದರು.
ನಂತರ ಮಾತನಾಡಿದ ಜೆಡಿಎಸ್ ಮುಖಂಡರಾದ ಆರ್ ಎನ್ ಮಂಜುನಾಥ್ ಹಿಂದಿನ ಕಾಲದಲ್ಲಿ ಜನ ಜೀವನ ನಡೆಸುವುದೇ ಕಷ್ಟಕರವಾಗಿತ್ತು ಅಂತಹ ಸಂಧರ್ಭದಲ್ಲಿ ವಿಧ್ಯಾಭ್ಯಾಸ ಕೈಗೆಟುವ ಹಾಗೆ ಇರಲಿಲ್ಲ. ಚರಿತ್ರೆಯನ್ನು ತಿಳಿದು ಮಾತನಾಡಬೇಕಾಗಿರುವ ದೇಶದ ಗೃಹ ಸಚಿವರು ಸಾರಾಸಗಟಾಗಿ ದೇಶದ ಅವಿದ್ಯಾವಂತರನ್ನು ದೇಶಕ್ಕೆ ಹೊರೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ದೇಶದ ಪ್ರಸ್ತುತ ಸಮಸ್ಯೆಗಳಾದ ಬೆಲೆ ಏರಿಕೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಈ ತರಹ ಬೇಜವಬ್ದಾರಿ ಹೇಳಿಕೆ ನೀಡುತ್ತಲೇ ಕಾಲಾಹರಣ ಮಾಡುತ್ತಿದ್ದಾರೆ ಎಂದು ಈ ಸಂಧರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ರೈತ ಮೋರ್ಚಾ ಮುಖಂಡರಾದ ಮುಡುಬಾ ಧರ್ಮಪ್ಪ,ಎನ್ ವರ್ತೇಶ್,ಮಂಜೋಜಿರಾವ್,ಈಶ್ವರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.