ರಿಪ್ಪನ್ ಪೇಟೆ :ಪುರಾಣ ಇತಿಹಾಸ ಜಾನಪದದ ಬೇರುಗಳು ಕಾಲ ದೇಶಗಳ ಗತಿಯಲ್ಲಿ ಪಡೆದುಕೊಂಡ ರೂಪಾಂತರಗಳನ್ನು ಮತ್ತು ವರ್ತಮಾನದಲ್ಲಿ ಅವುಗಳ ಬಿಳಲುಗಳು ವಿಸ್ತಾರಗೊಂಡ ವಿಶಿಷ್ಟತೆಯನ್ನು, ಸೂಕ್ಷ್ಮ ಸಂವಾದಕ್ಕೆ ಒಳಪಡಿಸಿರುವ ಕೃತಿ ‘ಬೇರು ಬಿಳಲು’ ಎಂದು ಚಿಂತಕರಾದ ಡಾ. ಎ. ಬಿ. ರಾಮಚಂದ್ರಪ್ಪ ಹರಿಹರ ಅವರು ಹೇಳಿದರು.
ಸಾರ ಕೇಂದ್ರ ದೊಂಬೆಕೊಪ್ಪ, ವಂಶಿಪ್ರಕಾಶನ ಬೆಂಗಳೂರು, ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್,ಹೊಸನಗರ.ಸಹಮತ ವೇದಿಕೆ,ತುಮರಿ. ಕಲಾ ಸಿಂಚನ, ಸಾಗರ. ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಇವರುಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ; ಡಾ. ರತ್ನಾಕರ ಸಿ ಕುನುಗೋಡು ಇವರ ‘ಬೇರು ಬಿಳಲು- ಸಾಂಸ್ಕೃತಿಕ ಚರಿತ್ರೆಯ ಮರುರಚನಾ ನೆಲೆಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಕೃತಿ ವಿಶ್ಲೇಷಣೆ ಮಾಡುತ್ತಾ ಸಂಶೋಧನಾಸಕ್ತರಿಗೆ ಮೌಲಿಕ ಒಳನೋಟಗಳನ್ನು ನೀಡುವುದರ ಜೊತೆಗೆ ಎಲ್ಲಾ ಬಗೆಯ ಓದುಗರಿಗೂ ಅಪ್ಯಾಯಮಾನವೆನಿಸುವ ಭಾಷೆ, ವಿಚಾರ ಮಂಡನೆಯ ಶೈಲಿಯನ್ನು ಲೇಖಕರು ಪ್ರಬುದ್ಧವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ಕೃತಿಯನ್ನು ಲೋಕಾರ್ಪಣೆಗೊಳಿಸಿದ ನೀನಾಸಂ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರು, ಶಿವಮೊಗ್ಗ ರಂಗಾಯಣದ ನಿಕಟಪೂರ್ವ ನಿರ್ದೇಶಕರಾದ ಡಾ. ಎಂ. ಗಣೇಶ್ ಅವರು; ಬಹುಚರ್ಚಿತ ಕನ್ನಡ ನಾಟಕಗಳನ್ನು ಗಂಭೀರ ಅಧ್ಯನಕ್ಕೊಳಪಡಿಸಿದ ಈ ಕೃತಿಯು; ಹೊಸ ಅದ್ಯಯನಕಾರರಿಗೆ ಮಾರ್ಗದರ್ಶಕ ಕೈಪಿಡಿಯಂತಿದೆ. ಕೃತಿಯ ಲೇಖಕರ ವ್ಯಾಪಕ ಓದು, ಗ್ರಹಿಕೆಯ ಕ್ರಮ, ಮಂಡನೆಯ ಶೈಲಿ, ನಿರೂಪಣಾ ತಂತ್ರ ವಿಭಿನ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಅವರು ಮಾತನಾಡಿ; ವಿಶ್ವವಿದ್ಯಾಲಯದಲ್ಲಿ ಮಂಡನೆಯಾಗಿ ಡಾಕ್ಟರೇಟ್ ಪಡೆಯುವ ಸಂಶೋಧನಾ ನಿಬಂಧಗಳು ಸಾರ್ವಜನಿಕವಾಗಿ ಮೌಲ್ಯಮಾಪನಕ್ಕೆ ಒಳಗಾಗದೆ ಕೊಠಡಿಗಳಲ್ಲಿಯೇ ಕೊಳೆಯುತ್ತಿವೆ. ಸಮಾಜಕ್ಕೆ ಬೌದ್ಧಿಕ ಪ್ರಚೋದನೆ ನೀಡುವ ಇಂತಹ ಸಂಶೋದನಾ ಮಹಾಪ್ರಬಂಧ ಲೋಕಾರ್ಪಣೆಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಸಾಹಿತಿ ಡಾ. ಮಾರ್ಷಲ್ ಶರಾಂ ಮಾತನಾಡಿ; ಕವಿತೆಗಳ ಮೂಲಕ ತಮ್ಮ ಪ್ರತಿಭೆಯನ್ನು ತೋರುತ್ತಿರುವ ಕವಿ ಡಾ. ರತ್ನಾಕರ ಕುನುಗೋಡು ಅವರು, ಸಂಶೋಧನೆಯ ಕ್ಷೇತ್ರದಲ್ಲೂ ಹೊಸ ಭರವಸೆ ಮೂಡಿಸಿದ್ದಾರೆ. ಸಾಹಿತ್ಯ ಜಗತ್ತಿಗೆ ಗಟ್ಟಿಯಾದ ದನಿಯೊಂದು ಸೇರ್ಪಡೆಗೊಂಡಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಜಿ. ಟಿ. ಸತ್ಯನಾರಾಯಣ ಕರೂರು ಅವರು; ಈ ಕೃತಿಯ ಕರ್ತೃವಿನ ಬೇರು ಶರಾವತಿ ಮುಳುಗಡೆಯಲ್ಲಿದೆ. ವಿದ್ಯುತ್ ಯೋಜನೆಗಾಗಿ ಸ್ಥಳಾಂತರಗೊಂಡ ಕುಟುಂಬದಿಂದ ಬಂದ ರತ್ನಾಕರ ಅವರು ತಮ್ಮ ನೆಲಮೂಲ ಸಂವೇದನೆಯನ್ನು ಸಂಶೋಧನೆಯ ತಾತ್ವಿಕತೆ ಯಾಗಿ ದುಡಿಸಿಕೊಂಡ ರೀತಿ ಅನನ್ಯವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಪ್ರೊ. ಚಂದ್ರಶೇಖರ. ಟಿ, ಮಂಜುನಾಥ ಕಾಮತ್, ಸತೀಶ್ ಎನ್ ರಿಪ್ಪನ್ ಪೇಟೆ, ಏಸು ಪ್ರಕಾಶ್, ಡಾ. ಗಣೇಶ ಕೆಂಚನಾಲ, ಸತ್ಯನಾರಾಯಣ ಸಿರಿವಂತೆ, ಮುಂತಾದವರು ಉಪಸ್ಥಿತರಿದ್ದರು. ಸೃಜನ್ ಹೆಗಡೆ ಪ್ರಾರ್ಥಿಸಿ, ಪ್ರತಿಮಾ ಸ್ವಾಗತಿಸಿ, ಸುರೇಶ್ ಜಂಬಾನಿ ಕಾರ್ಯಕ್ರಮ ನಿರೂಪಿಸಿದರು.
ವರದಿ : ಸೆಬಾಸ್ಟಿಯನ್ ಮ್ಯಾಥ್ಯೂಸ್