ರಿಪ್ಪನ್ ಪೇಟೆ : ಕಟ್ಟುಕೋವಿಯಿಂದ ಕಾಲು ಕಳೆದುಕೊಂಡ ಯುವಕನ ಸಂಕಷ್ಟ ಕೇಳುವವರಾರು !!??

ರಿಪ್ಪನ್ ಪೇಟೆ : ತನ್ನದಲ್ಲದ ತಪ್ಪಿಗೆ ಕಾಲನ್ನು ಕಳೆದುಕೊಂಡು ಸಂಕಷ್ಟಕೊಳಗಾಗಿರುವ ಯುವಕನ ಗೋಳು ಕೇಳುವರಿಲ್ಲದೇ ಪರಿತಪಿಸುತ್ತಿರುವಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯತಿಯ ಬೆನವಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ ಡಿಸೆಂಬರ್‌ನಲ್ಲಿ ಬೆನವಳ್ಳಿ ಗ್ರಾಮದ ಪ್ರವೀಣ (26) ಎಂಬ ಯುವಕನಿಗೆ ಖಾಸಗಿ ವ್ಯಕ್ತಿಯೋರ್ವ ಗದ್ದೆಯಲ್ಲಿ ಕಟ್ಟಿದ ಕಟ್ಟುಕೋವಿಯಿಂದ ಸಿಡಿದ ಗುಂಡು ಕಾಲಿಗೆ ತಾಗಿ ಈಗ ಕಾಲು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿ ಜೀವನ ಪರಿಹಾರಕ್ಕಾಗಿ ಬೇರೆಯವರಲ್ಲಿ ಕೈಚಾಚುವ ಪರಿಸ್ಥಿತಿ ಬಂದೊದಗಿದೆ.
ಬಡ ಕುಟುಂಬಕ್ಕೆ ಆಸರೆಯಾಗಿದ್ದ ಗಂಡ ಹಾಗೂ ದೊಡ್ಡ ಮಗ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಹೋಗಿದ್ದರು.ಈಗ ಇರುವ ಒಬ್ಬ ಮಗನು ಕಾಲು ಕಳೆದುಕೊಂಡು ಮನೆಯಲ್ಲೇ ಇರುವುದರಿಂದ ಇವರ ತಾಯಿಯ ಪರಿಸ್ಥಿತಿ ಆತಂಕಕಾರಿಯಾಗಿದೆ.

ಡಿಸೆಂಬರ್10 ರ ರಾತ್ರಿ ತನ್ನ ಮನೆಯ ಜಾನುವಾರು ಬಂದಿಲ್ಲ ಎಂದು ತನ್ನ ಹೊಲಕ್ಕೆ ಹೋದ ಪ್ರವೀಣನಿಗೆ ಪಕ್ಕದ ಜಮೀನಿನ ಮಾಲೀಕರು ಕಾಡು ಪ್ರಾಣಿಗಳ ಬೇಟೆಗೆ ಬೇಲಿ ಬದಿಯಲ್ಲಿ ಕಟ್ಟುಕೋವಿಯನ್ನು ಕಟ್ಟಿದ್ದು ಅದರಿಂದ ಸಿಡಿದ ಗುಂಡಿನಿಂದ ಯುವಕನ ಕಾಲು ಛಿದ್ರವಾಗಿ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದನು ನಂತರ ಅರೆಪ್ರಜ್ನೆಗೆ ಬಂದಾಗ ಯುವಕನ ಬಲಗಾಲು ತುಂಡಾಗಿ ಜೋತಾಡುತ್ತಿದ್ದು,ಗುಂಡು ಸಿಡಿದ ಸ್ಥಳವನ್ನು ಗಮನಿಸಿದಾಗ ಅಲ್ಲಿ ಕಾಡುಪ್ರಾಣಿಗಳ ಬೇಟೆಗಾಗಿ ಇಟ್ಟಿರುವ ಕಟ್ಟುಕೋವಿ ಕಂಡುಬರುತ್ತದೆ.ಅದಾದ ನಂತರ ಅರೆ ಪ್ರಜ್ಞಾಸ್ಥಿತಿಯಲ್ಲಿ ಪ್ರವೀಣ ತನ್ನ ಸ್ನೇಹಿತನಿಗೆ ಕರೆಮಾಡಿ ಘಟನೆ ಕುರಿತು ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ನೇಹಿತರು ಚಿಕಿತ್ಸೆಗಾಗಿ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತರುತ್ತಾರೆ.
 ತೀವ್ರತರವಾದ ಗಾಯವಾದ ಹಿನ್ನಲೆಯಲ್ಲಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ಹಿಂಜರಿದ ಕಾರಣ ವೈದ್ಯರ ಸಲಹೆ ಮೇರೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.ಅಲ್ಲೂ ಸಹ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಊರಿನವರೆಲ್ಲಾ ಸೇರಿ ಹಣ ಸಂಗ್ರಹಿಸಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಣಿಪಾಲ್ ವೈದ್ಯರು ಗುಂಡಿನ ಹೊಡೆತದ ತೀವ್ರತೆಯನ್ನು ಗಮನಿಸಿ ಕಾಲು ಕತ್ತರಿಸಲೇ ಬೇಕು ಎಂದು ಸಲಹೆ ನೀಡಿ ಕುಟುಂಬಕ್ಕೆ ಆಸರೆಯಾಗಿದ್ದ ಯುವಕ ಪ್ರವೀಣನ ಬಲಗಾಲನ್ನು ಮೊಣಕಾಲಿಂದ ಮೇಲೆ ಕತ್ತರಿಸುತ್ತಾರೆ. ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಬಂದು ಪರೀಶೀಲಿಸಿ ಯುವಕನಿಂದ ಮಾಹಿತಿ ಪಡೆದುಕೊಂಡಿರುತ್ತಾರೆ.

ಸ್ವಲ್ಪ ಗುಣಮುಖನಾಗಿ ನಂತರ ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ಬಂದು ಪ್ರಕರಣದ ಕುರಿತು ವಿಚಾರಿಸಿದಾಗ ತಾನು ನೀಡಿದ ದೂರಿನ ಆರೋಪಿ ಪುಟ್ಟಪ್ಪ ಹಾಗೂ ಆತನ ಮಗ ವಿನೋದ್ ಎಂಬುವವರ ಮೇಲೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂದಿನ ಪಿಎಸ್ಐ ಪಾರ್ವತಿಭಾಯಿ ಯಾವುದೇ ಪ್ರಕರಣ ದಾಖಲಿಸದೇ ಇರುವುದು ಯುವಕನಿಗೆ ಗೊತ್ತಾಗುತ್ತದೆ.ಈ ಬಗ್ಗೆ ವಿಚಾರಿಸಿದಾಗ ಅಂದಿನ ಪಿಎಸ್ಐ ಸಂತ್ರಸ್ತ ಯುವಕನಿಗೆ ಬೆದರಿಸಿ ಕಳುಹಿಸುತ್ತಾರೆ ಎಂದು ಸಂತ್ರಸ್ತ ಯುವಕ ತನ್ನ ಅಳಲು ತೋಡಿಕೊಳ್ಳುತ್ತಾನೆ.

ಈಗ  ಅಂದಿನ ಪಿಎಸ್ಐ ಪಾರ್ವತಿ ಬಾಯಿ ಈ  ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದು ಸಂತ್ರಸ್ತ ಪ್ರವೀಣ್ ರಾಜ್ಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ ರವರನ್ನು ಗ್ರಾಮಸ್ಥರ ಸಹಕಾರದೊಂದಿಗೆ ನೇರವಾಗಿ ಭೇಟಿಯಾಗಿ ತಪ್ಪಿತಸ್ಥ ಆರೋಪಿಗಳು ಹಾಗೂ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ತನಗೆ ಸೂಕ್ತ ಪರಿಹಾರ ದೊರಕಿಸಕೊಡಬೇಕೆಂದು ಮನವಿ ಮಾಡಿದ್ದಾನೆ.
ಒಟ್ಟಾರೆಯಾಗಿ ಸಂತ್ರಸ್ತ ಯುವಕನಿಗೆ ಸೂಕ್ತವಾದ ರೀತಿಯಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹಕರಿಸಬೇಕಾಗಿದೆ.




ಸಂತ್ರಸ್ತ ಯುವಕ ಪ್ರವೀಣ್ ಗೆ ನ್ಯಾಯ ದೊರಕದೇ ಇದ್ದಲ್ಲಿ ಉಗ್ರ ಹೋರಾಟ : ಎಂ ಎಸ್ ಉಮೇಶ್

ರಿಪ್ಪನ್ ಪೇಟೆ : ಬಡ ಕುಟುಂಬಕ್ಕೆ ಆಸರೆಯಾಗಿದ್ದ ಯುವಕ ಪ್ರವೀಣ್ ನ ಇಂದಿನ ಈ ಸ್ಥಿತಿಗೆ ಕಾರಣರಾದ ಪಕ್ಕದ ಜಮೀನಿನ ಮಾಲೀಕರು ಹಾಗೂ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಅಂದಿನ ಪಿಎಸ್ಐ ಪಾರ್ವತಿ ಬಾಯಿ ರವರ ಮೇಲೆ ಸೂಕ್ತ ಕ್ರಮ ತೆಗೆದು ಕೊಳ್ಳದೇ ಇದ್ದಲ್ಲಿ  ಉಗ್ರ ಹೋರಾಟ ಮಾಡಲಾಗುವುದು ಎಂದು ಕೆಂಚನಾಲ ಗ್ರಾಪಂ ಮಾಜಿ ಅಧ್ಯಕ್ಷರಾದ ಎಂ ಎಸ್ ಉಮೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
ಮಾದ್ಯಮದವರೊಂದಿಗೆ ಮಾತನಾಡಿದ ಅವರು ಈ ವಿಚಾರದ ಬಗ್ಗೆ ಶಾಸಕರಾದ ಹರತಾಳು ಹಾಲಪ್ಪ ಹಾಗೂ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರ ಬಳಿ ಮಾಹಿತಿ ನೀಡಿದ್ದು ಅವರಿಂದ ನ್ಯಾಯ ದೊರೆಯವ ವಿಶ್ವಾಸವಿದೆ ಹಾಗೂ ಸಂತ್ರಸ್ತನಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯಹಸ್ತ ದೊರೆಯುವ ನಂಬಿಕೆ ಇದೆ ಎಂದರು.

ಒಂದು ವೇಳೆ  ಬೆನವಳ್ಳಿ ಗ್ರಾಮದ ಪ್ರವೀಣ್ ರವರು ತಮ್ಮದಲ್ಲದ ತಪ್ಪಿಗೆ ಈಗ ನರಕಯಾತನೆ ಅನುಭವಿಸುತ್ತಿದ್ದು ಅವರ ಈ ಪರಿಸ್ಥಿತಿಗೆ ಕಾರಣಕರ್ತರಾದ ಜಮೀನಿನ ಮಾಲೀಕರು ಹಾಗೂ ಈ ಕೇಸನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಕೆರೆಹಳ್ಳಿ ದೇವರಾಜ್,ಲಿಂಗಪ್ಪ,ವಿಜಯ್ ಕೆರೆಹಳ್ಳಿ,ಸಂತ್ರಸ್ತ ಪ್ರವೀಣ್ ಹಾಗೂ ಅರಸಾಳು ನವೀನ್ ಮತ್ತಿತರರು ಉಪಸ್ಥಿತರಿದ್ದರು.





Leave a Reply

Your email address will not be published. Required fields are marked *