ರಿಪ್ಪನ್‌ಪೇಟೆ: ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಲಿಂಗಾಯಿತ ಜಾತಿಗೆ 2(ಎ) ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ಜಾಗೃತ ಸಭೆ ನಡೆಸಿ ತಾಲೂಕಿನ ವ್ಯಾಪ್ತಿಯ ವೀರಶೈವ ಸಮಾಜದಲ್ಲಿ ಒಡಕು ಹುಟ್ಟುಹಾಕುವ ಪ್ರಯತ್ನ ನಡೆಸುತ್ತಿದ್ದಾರೆಂದು ಹೊಸನಗರ ತಾಲ್ಲೂಕು ವೀರಶೈವ ಜಾಗೃತಿ ವೇದಿಕೆಯ ಮುಖಂಡ,ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಆರೋಪಿಸಿದ್ದಾರೆ.
ಪಟ್ಟಣದ ಗ್ರಾಪಂ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಮಾಜದ ಎಲ್ಲಾ ಬಾಂಧವರು ಹೊಂದಿಕೊಂಡು ಹೋಗಬೇಕಾಗಿದೆ.ವೀರಶೈವರು ಹಾಗೂ ಲಿಂಗಾಯತರು ಒಂದೇ ಆಗಿದ್ದು ಸಮಾಜವನ್ನು ಒಡೆಯುವ ಕೆಲಸಕ್ಕೆ ಯಾರು ಕೈ ಹಾಕಬಾರದು.ಅಖಿಲಾ ಭಾರತ ವೀರಶೈವ ಮಹಸಭಾ ಹಾಗೂ ಸಮಾಜದ ಎಲ್ಲಾ ಮಠಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಸಮಾಜದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕೆ ಹೊರತು ಹಳ್ಳಿ ಹಳ್ಳಿಗೆ ಭೇಟಿ ಕೊಟ್ಟು ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಬಾರದು.ಸಮಾಜ ಒಡೆಯುವ ಕೆಲಸಕ್ಕೆ ಈ ಹಿಂದೆ ಪ್ರಭಾವಿ ಸಚಿವರುಗಳಾದ ಎಂ ಬಿ ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಕೈ ಹಾಕಿ ಅವರ ಪರಿಸ್ಥಿತಿ ಏನಾಯ್ತು ಎಂದು ರಾಜ್ಯದ ಜನ ನೋಡಿದ್ದಾರೆ.
ಒಳಪಂಗಡಗಳನ್ನು ಒಂದುಗೂಡಿಸಿ ಎಲ್ಲರಿಗೂ 2 (ಎ) ಮೀಸಲಾತಿ ದೊರಕಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ, ಆದರೆ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿಯವರು ಜನರ ಮತ್ತು ಒಳಪಂಗಡಗಳ ಬಳಿಬಂದು ಜಾಗೃತ ಸಭೆ ನಡೆಸುವುದು ಅಗತ್ಯವಿಲ್ಲ. ಜಾಗೃತ ಸಭೆ ನಡೆಸುವುದೇ ಇದ್ದರೆ ಅಖಿಲಾ ಭಾರತ ವೀರಶೈವ ಮಹಸಭಾ ಹಾಗೂ ಸಮಾಜದ ಎಲ್ಲಾ ಮಠಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಲಿ.ಅದನ್ನು ಬಿಟ್ಟು ಮಿಸಲಾತಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಣ್ಣಪುಟ್ಟ ಒಳಪಂಗಡವನ್ನು ಒಡೆಯುವ ಕೆಲಸ ಮಾಡುತ್ತಿರುವ ಶ್ರೀಗಳಿಗೆ ತಾಲ್ಲೂಕಿನಲ್ಲಿ ಜಾಗೃತ ಸಭೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಈ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಸಚಿನ್ ಗೌಡ ಮುಖಂಡರಾದ ಮೆಣಸೆ ಆನಂದ್,ಸ್ವಾಮಿ ಗೌಡ,ಜಂಬಳ್ಳಿ ಗಿರೀಶ್,ಯೊಗೇಂದ್ರ ಗೌಡರು,ತೀರ್ಥೆಶ್,ದೇವೆಂದ್ರಪ್ಪ ಗೌಡರು,ರಾಜೇಂದ್ರ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.