ಶಿವಮೊಗ್ಗ : ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಟಾ 2003 ಕಾಯಿದೆಯ ಪರಿಣಾಮಕಾರಿ ಅನುಷ್ಠಾನ ಕುರಿತು, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನಗರದ ಐಎಂಎ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಎಚ್ಒ ರಾಜೇಶ್ ಸುರಗೀಹಳ್ಳಿ ಅವರು, ಜಿಲ್ಲೆಯಲ್ಲಿ ಗಾಂಜಾ ಸೇವನೆ ಅತಿ ಹೆಚ್ಚಿದೆ. ಆದರೆ ಈ ಸೇವನೆ ಕುರಿತು ದಾಖಲೆಗಳಿಲ್ಲದ ಕಾರಣ ಪ್ರಕರಣ ದಾಖಲಿಸುವುದು ಕಷ್ಟವಾಗಿದೆ. ಬೆಂಗಳೂರಿನಲ್ಲಿ ಗಾಂಜಾ ಸೇವನೆ ಪತ್ತೆ ಹಚ್ಚಲು ಕಿಟ್‍ಗಳ ಮೂಲಕ ಪರೀಕ್ಷೆ ಮಾಡುವ ಪ್ರಯೋಗ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿಯೂ ಈ ಗಾಂಜಾ ಸೇವನೆ ಪತ್ತೆ ಹಚ್ಚುವ ಕಿಟ್‍ಗಳನ್ನು ಉಪಯೋಗಿಸಿ ಗಾಂಜಾ ಪ್ರಕರಣಗಳನ್ನು ದಾಖಲಿಸಿ, ಗಾಂಜಾ ಸೇವನೆಗೆ ಕಡಿವಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್.ಎಸ್.ಎ ಮಾತನಾಡಿ ಮಕ್ಕಳು, ಯುವಜನತೆ ಸೇರಿದಂತೆ ಜನ ಸಮುದಾಯವನ್ನು ಮಾದಕ ದ್ರವ್ಯಗಳ ಬಳಕೆಯಿಂದ ದೂರವಿಡುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಕೋಟ್ಪಾ ಕಾಯ್ದೆ 2003 ಬಗ್ಗೆ ತಿಳಿದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್, ಪಾಲ್ಗೊಂಡಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಪ್ರತಿಮಾ ಪ್ರಾರ್ಥಿಸಿದರು. ಎನ್‍ಟಿಸಿಪಿ ಸಾಮಾಜಿಕ ಕಾರ್ಯಕರ್ತ ರವಿರಾಜ್ ನಿರೂಪಿಸಿದರು. ಎನ್.ಟಿ.ಪಿ.ಸಿ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಮಲ್ಲಪ್ಪ.ಓ, ಎನ್‍ಟಿಸಿಪಿ ಜಿಲ್ಲಾ ಸಲಹೆಗಾರ ಹೇಮಂತರಾಜ್ ಅರಸ್, ಐಪಿಹೆಚ್ ಯೋಜನಾಧಿಕಾರಿ ಅಚ್ಯುತ ಎನ್.ಜಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ತಂಬಾಕು ಬಳಕೆ ದುಷ್ಪರಿಣಾಮಗಳು ಮತ್ತು ಕೋಟ್ಪಾ ಕಾಯ್ದೆ 2003 ಕುರಿತು ಮಾಹಿತಿ ನೀಡಿದರು.