ಸದರಿ ಗ್ರಾಮದ ಸರಿಯಾಗಿ ಕಣ್ಣು ಕಾಣಿಸದ ಮತ್ತು ಕಿವಿ ಕೇಳಿಸದ ಸುಮಾರು 75 ವರ್ಷದ ವೃದ್ಧೆ ಗೌರಮ್ಮ ಕೋಂ ಡಾಕಪ್ಪ ಎಂಬುವರಿಗೆ ಸರ್ವೇ ನಂಬರ್ 37 ರಲ್ಲಿ ಒಂದು ಎಕರೆ ಜಾಗ ಮಂಜೂರಾಗಿದ್ದು ಕೃಷಿ ಕಾರ್ಯ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುವ ಕುಟುಂಬಕ್ಕೆ ಏಕಾಏಕಿ ಗ್ರಾಮದ ಶ್ರೀಮಂತ ಖಾಸಗಿ ವ್ಯಕ್ತಿಗಳು ಕಂದಾಯ ಇಲಾಖೆಯವರನ್ನು ಬಳಸಿಕೊಂಡು ಜಮೀನಿಗೆ ಹೋಗಿ ಬರಲು ಬದಲಿ ವ್ಯವಸ್ಥೆಯಿದ್ದರು ಕೂಡಾ ದುರುದ್ದೇಶದಿಂದ ಇವರ ಜಾಗದಲ್ಲಿ ರಸ್ತೆ ಬಿಡುವಂತೆ ಒತ್ತಡ ಹೇರಿ ಶಾಶ್ವತವಾಗಿರುವಂತ ಕಲ್ಲುಕಂಬದ ಬೇಲಿಯನ್ನು ಕಿತ್ತುಹಾಕಿ ಕೋಡೂರು ಗ್ರಾಮ ಪಂಚಾಯ್ತಿ ಕರವಸೂಲಿಗಾರ ಪಂಚಾಯತ್ ಅಭಿವೃದ್ದಿ ಅಧಿಕಾರಿಗೂ ಮಾಹಿತಿ ನೀಡದೆ ವಾಹನವನ್ನು ಬಳಸಿಕೊಂಡು ಕಿತ್ತು ಹಾಕಲಾದ ಕಲ್ಲುಕಂಬಗಳನ್ನು, ಬೇಲಿ ತಂತಿಗಳನ್ನು ಹೇರಿಕೊಂಡು ಹೋಗಿದ್ದಾರೆಂದು ವೃದ್ಧೆ ಗೌರಮ್ಮ ತನ್ನ ನೋವನ್ನು ಮಾಧ್ಯಮದವರ ಬಳಿ ಹೇಳಿಕೊಂಡು, ‘ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ, ಸ್ವಾಮಿ ನಮ್ಮನ್ನು ಯಾರು ರಕ್ಷಣೆ ಮಾಡುತ್ತಾರೆ ನೀವೇ ನೋಡಿ’ ಎಂದು ಕಣ್ಣೀರು ಹಾಕುತ್ತ ತನ್ನ ನೋವನ್ನು ತೋಡಿಕೊಂಡರು.
ಇದೇ ರಸ್ತೆ ವಿಚಾರವಾಗಿ ಈಗಾಗಲೇ ಎರಡು ಗುಂಪಿನವರ ಮಧ್ಯೆ ಗಲಾಟೆ ನಡೆದಿದ್ದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಚ್.ಕುನ್ನೂರು ಗ್ರಾಮದಲ್ಲಿ ಸುಮಾರು 50-60 ವರ್ಷಗಳಿಂದ ಓಡಾಡುತ್ತಿದ್ದ ರಸ್ತೆಗೆ ಗ್ರಾಮದ ಶ್ರೀಮಂತ ಕುಟುಂಬದವರು ಬೇಲಿ ಹಾಕಿ ಓಡಾಟಕ್ಕೆ ಅಡ್ಡಿಪಡಿಸಿದ್ದಾರೆಂದು ಹೆಚ್.ಕುನ್ನೂರು ಗ್ರಾಮದ ವಯೋವೃದ್ಧೆ ನಾಗಮ್ಮ ಆರೋಪಿಸಿ ಇನ್ನೇರಡು ದಿನಗಳಲ್ಲಿ ನಮಗೆ ಮನೆಗೆ ಹೋಗಿ ಬರುವ ರಸ್ತೆಗೆ ಅಳವಡಿಸಲಾದ ಬೇಲಿಯನ್ನು ತೆರವುಗೊಳಿಸದಿದ್ದರೆ ನನ್ನ ಕುಟುಂಬದವರೊಂದಿಗೆ ಕೋಡೂರು ಗ್ರಾಮ ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಈ ಕೂಡಲೇ ರಸ್ತೆ ತೆರವುಗೊಳಿಸಿ ಓಡಾಟಕ್ಕೆ ಅನುಕೂಲ ಕಲ್ಪಿಸದಿದ್ದರೆ ನಾನು ನನ್ನ ಕುಟುಂಬದವರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಬಗ್ಗೆ ಗ್ರಾಮ ಲೆಕ್ಕಾದಿಕಾರಿಗಳನ್ನು ಪ್ರಶ್ನಿಸಿದಾಗ ವೃದ್ಧೆ ನಾಗಮ್ಮ ಎಂಬುವರು ಕಳೆದ 50-60 ವರ್ಷಗಳಿಂದ ಓಡಾಡುವಂತಹ ರಸ್ತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಬಿಡುಗಡೆಯಾಗಿದ್ದು ರಸ್ತೆ ನಿರ್ಮಾಣಕ್ಕೂ ಮುನ್ನವೇ ಹಳೆಯ ರಸ್ತೆಗೆ ದಿ.ಕುನ್ನೂರು ಮಂಜಪ್ಪನವರ ಕುಟುಂಬಸ್ಥರು ಬೇಲಿ ಹಾಕಿದ್ದಾರೆಂಬ ದೂರಿನನ್ವಯ ಸ್ಥಳ ಪರಿಶೀಲನೆ ನಡೆಸಿ ಮಹಜರು ಕ್ರಮ ಜರುಗಿಸಿ ತಹಶೀಲ್ದಾರರಿಗೆ ವರದಿ ಮಾಡಿರುವುದಾಗಿ ಇಲ್ಲಿನ ಗ್ರಾಮ ಲೆಕ್ಕಾಧಿಕಾರಿ ಇಂದಿರಾ ಹೇಳಿದರು.
ಇನ್ನಾದರೂ ರಾಜ್ಯದ ಗೃಹ ಸಚಿವರ ಸ್ವಕ್ಷೇತ್ರ ಹಾಗೂ ಸಮಾಜವಾದದ ನೆಲದಲ್ಲಿ ಬಡವರ ಮೇಲೆ ಶ್ರೀಮಂತರಿಂದಾಗುತ್ತಿರುವ ದೌರ್ಜನ್ಯಕ್ಕೆ ಸಚಿವರು ಕ್ರಮ ಕೈಗೊಳ್ಳುವುದರೊಂದಿಗೆ ಬಡವರಿಗೆ ನ್ಯಾಯ ಕೊಡಿಸುವರೆ ಎಂದು ಕಾದುನೋಡಬೇಕಾಗಿದೆ.