ಶಿವಮೊಗ್ಗ :ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವರು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದ್ದು, ಇದರ ಅಂಗವಾಗಿ 75 ನೇ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ.
ಮಾರ್ಚ್ 12 ರಂದು ಭಾರತದ ಪ್ರಧಾನ ಮಂತ್ರಿಯವರು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಕುರಿತು ಸ್ಪೂರ್ತಿದಾಯಕ ಭಾಷಣದ ಮೂಲಕ ಆಜಾದಿ ಕಾ ಅಮೃತ ಮಹೋತ್ಸವದ ಪರಿಕಲ್ಪನೆ ಬಗ್ಗೆ ತಿಳಿಸಿ, ಮಹೋತ್ಸವಕ್ಕೆ ಹಸಿರು ನಿಶಾನೆ ತೋರಿಸಿದ್ದರು.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸಾಮಾಜಿಕ ಅಂತರದ ಮಾನದಂಡವನ್ನು ಅನುಸರಿಸಿ ದೇಶಾದ್ಯಂತ ಫಿಟ್‍ನೆಸ್‍ನ ಅಗತ್ಯತೆಯನ್ನು ಸಕ್ರಿಯಗೊಳಿಸಲು ‘ಫಿಟ್ ಇಂಡಿಯಾ ಫ್ರೀಡಂ ರನ್’ ಅಭಿಯಾನವನ್ನು ವರ್ಚುವಲ್ ರನ್ ಪರಿಕಲ್ಪನೆಯ ಮೇಲೆ ಆರಂಭಿಸಲಾಯಿತು. 2020 ರ ಆಗಸ್ಟ್ 15ರಿಂದ ಅಕ್ಟೋಬರ್ 2 ರವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೇಂದ್ರ/ರಾಜ್ಯ ಇಲಾಖೆಗಳು ಮತ್ತು ಕೇಂದ್ರ ಸಶಸ್ತ್ರ ಪಡೆಗಳು, ಎನ್‍ಜಿಓ ಗಳು, ಖಾಸಗಿ ಸಂಸ್ಥೆಗಳು, ಶಾಲೆಗಳು, ವ್ಯಕ್ತಿಗಳು, ಯುವಕ/ಯುವತಿ ಮಂಡಳಿಗಳು, ಎನ್‍ಎಸ್‍ಎಸ್, ಎನ್‍ಸಿಸಿ ಸೇರಿದಂತೆ ಸುಮಾರು 5 ಕೋಟಿಗೂ ಹೆಚ್ಚು ಜನರು ಭಾಗವಹಿಸಿ ಸುಮಾರು 18 ಕೋಟಿ ಕಿ.ಮೀ ದೂರವನ್ನು ಕ್ರಮಿಸಿದ್ದಾರೆ.
2021 ರ ಆಗಸ್ಟ್ 13 ರಿಂದ ಅಕ್ಟೋಬರ್ 2 ರವರೆಗೆ ಮುಕ್ತಾಯಗೊಳ್ಳುವ ಫಿಟ್ ಇಂಡಿಯಾ ಫ್ರೀಡಮ್ 2.0 ರನ್ ಅಭಿಯಾನ ಆರಂಭವಾಗಿದ್ದು, ಜನರು ತಮ್ಮ ದೈನಂದಿನ ಜೀವನದಲ್ಲಿ ಓಟ ಮತ್ತು ಕ್ರೀಡೆಯಂತಹ ಫಿಟ್‍ನೆಸ್ ಚಟುವಟಿಕೆಗಳನ್ನು ತೆಗೆದುಕೊಳ್ಳಲು ಈ ರನ್ ಪ್ರೋತ್ಸಾಹಿಸುತ್ತಿದೆ. ಬೊಜ್ಜು, ಆಲಸ್ಯ, ಒತ್ತಡ, ಆತಂಕ, ರೋಗ ಇತ್ಯಾದಿಗಳಿಂದ ಮುಕ್ತಿ ಪಡೆಯುವುದು ಇದರ ಗುರಿಯಾಗಿದೆ. ಈ ಅಭಿಯಾನದ ಮೂಲಕ ‘ಫಿಟ್ನೆಸ್ ಕಿ ಡೋಸ್ ಆಧಾ ಗಂಟಾ ರೋಜ್’ ಘೋಷವಾಕ್ಯದ ಮೂಲಕ ನಾಗರೀಕರು ತಮ್ಮ ಜೀವನದಲ್ಲಿ ಕನಿಷ್ಟ 50 ನಿಮಿಷಗಳ ದೈಹಿಕ ಚಟುವಟಿಕೆ/ಯೋಗ/ಧ್ಯಾನದಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸಂಕಲ್ಪ ಮಾಡಲ ಕರೆ ನೀಡಲಾಗಿದೆ.
ರಾಷ್ಟ್ರಾದ್ಯಂತ ಫಿಟ್‍ನೆಸ್ ಇಂಡಿಯಾ ಫ್ರೀಡಂ ರನ್ 2.0 ಅಭಿಯಾನವನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಹಾಗೂ ರಾಜ್ಯ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ನಿಸಿತ್ ಪ್ರಮಾಣಿಕ್ ರವರು 2021 ರ ಆಗಸ್ಟ್ 13 ರಂದು ಚಾಲನೆ ನೀಡಿದರು. ಬಿಎಸ್‍ಎಫ್, ಸಿಐಎಸ್‍ಎಫ್, ಸಿಆರ್‍ಪಿಎಫ್, ರೈಲ್ವೇ, ನೆಹರು ಯುವ ಕೇಂದ್ರ, ಐಟಿಬಿಪಿ, ಎನ್‍ಎಸ್‍ಜಿ, ಎಸ್‍ಎಸ್‍ಬಿ ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಆಗಸ್ಟ್ 13 ರಂದು ದೇಶದ ವಿವಿಧ ಐತಿಹಾಸಿಕ ಸ್ಥಳಗಳಲ್ಲಿ 75 ಕಾರ್ಯಕ್ರಗಳು ನಡೆದವು.
ನಾವು 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫಿಟ್ ಮತ್ತು ಆರೋಗ್ಯಕರ ಭಾರತಕ್ಕಾಗಿ ನಾವೆಲ್ಲ ಸಂಕಲ್ಪ ಮಾಡಬೇಕು. ಏಕೆಂದರೆ ಫಿಟ್ ಮತ್ತು ಆರೋಗ್ಯಕರ ಭಾರತ ಮಾತ್ರ ಬಲಿಷ್ಟ ಭಾರತವಾಗಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಫ್ರೀಡಂ ರನ್ 2.0 ನಲ್ಲಿ ಭಾಗವಹಿಸಿ ಮತ್ತು ಈ ಅಭಿಯಾನವನ್ನು ಜನರ ಚಳವಳಿಯನ್ನಾಗಿ ಮಾಡಬೇಕೆಂದು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಆಶಿಸಿದೆ. ಅಕ್ಟೋಬರ್ 2 ರವರೆಗೆ ಪ್ರತಿವಾರ 75 ಜಿಲ್ಲೆಗಳ 75 ಹಳ್ಳಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಹೀಗಾಗಿ ಫಿಟ್ ಇಂಡಿಯಾ ಫ್ರೀಡಂ ರನ್‍ಗಳನ್ನು ರಾಷ್ಟ್ರದ 744 ಜಿಲ್ಲೆಯ 75 ಗ್ರಾಮಗಳಲ್ಲಿ ಮತ್ತು 30 ಸಾವಿರ ಶಿಕ್ಷಣ/ಸಂಘ ಸಂಸ್ಥೆಗಳಲ್ಲಿ ದೇಶಾದ್ಯಂತ ಆಯೋಜಿಸಲಾಗುತ್ತಿದೆ.
ಆ.29-ಕ್ರೀಡಾ ದಿನದ ಪ್ರಯುಕ್ತ ಫಿಟ್ ಇಂಡಿಯಾ ಫ್ರೀಡಂ ರನ್ :
ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‍ಎಸ್‍ಎಸ್/ಎನ್‍ಸಿಸಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಎನ್‍ಜಿಓ, ಯುವಜನ ಸಂಘಟನೆಗಳು ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಂದು ಬೆಳಿಗ್ಗೆ ನೆಹರೂ ಕ್ರೀಡಾಂಗಣದಿಂದ ಶಿವಪ್ಪ ನಾಯಕ ಅರಮನೆವರೆಗೆ ಫಿಟ್ ಇಂಡಿಯಾ ಫ್ರೀಡಂ ರನ್ 2.0 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ.ಕೆ.ಟಿ.ಕೆ ತಿಳಿಸಿದ್ದಾರೆ.
*ನಿರಂತರ ಸ್ಥಳೀಯ ಸುದ್ದಿಯನ್ನು ಪಡೆಯಲು ಪೋಸ್ಟ್ ಮ್ಯಾನ್ ಫೇಸ್‌ಬುಕ್ ಪೇಜ್ ನ್ನು ಲೈಕ್ ಮಾಡಿ.*