ಚಾಮರಾಜನಗರ: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಂಥ ಪ್ರಕರಣಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ. ಇದಕ್ಕೆ ಏನೂ ಮಾಡೋಕೆ ಆಗಲ್ಲ ಎಂದು ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಇವೆಲ್ಲವೂ ಸಮಾಜದಲ್ಲಿ ನಡೆಯುತ್ತವೆ. ನಡೆಯಬಾರದು, ಆದರೂ ನಡೆಯುತ್ತವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ನಾನು ಗೃಹ ಮಂತ್ರಿ ಅಲ್ಲ, ಈ ಸಮಸ್ಯೆಯನ್ನು ಗೃಹಮಂತ್ರಿ ಬಗೆ ಹರಿಸುತ್ತಾರೆ. ಗೂಂಡಾಗಳು ಗೂಂಡಾಗಿರಿ ಮಾಡುತ್ತಿದ್ದಾರೆ. ಮೂರು ಲಕ್ಷ ರುಪಾಯಿ ಕೊಟ್ಟರೆ ಬಿಡುವುದಾಗಿ ಹೇಳಿದ್ದಾರೆ. ಇದಕ್ಕೆಲ್ಲಾ ನಾವು ಏನು ಮಾಡಲು ಆಗಲ್ಲ ಎಂದರು.
ಇನ್ನು ಒಬ್ಬನಿಗೆ ಐದು ಕೆಜಿ ಅಕ್ಕಿ ಸಾಕು ಎಂಬ ಹೇಳಿಕೆಗೆ ಈಗಲೂ ಬದ್ದ. ಒಂದು ತಿಂಗಳಿಗೆ ಒಬ್ಬ ವ್ಯಕ್ತಿಗೆ ಐದು ಕೆಜಿ ಅಕ್ಕಿ ಸಾಕು. ಜನರು ರೊಟ್ಟಿ, ಚಪಾತಿ, ಬೇಳೆ ತಿನ್ನುತ್ತಾರೆ. ಬಳಿಕ ಅನ್ನ ತಿನ್ನುತ್ತಾರೆ. ನಾನು ಕೂಡ ಎರಡು ಚಪಾತಿ ತಿಂದು ಸ್ವಲ್ಪ ಅನ್ನ ತಿಂದೆ. ನನ್ನ ಪ್ರಕಾರ ಒಬ್ಬನಿಗೆ ಐದು ಕೆಜಿ ಅಕ್ಕಿ ಸಾಕು ಎಂದರು.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಏಕ ವಚನದಲ್ಲೇ ಹರಿಹಾಯ್ದ ಸಚಿವರು, ಸಿದ್ದರಾಮಯ್ಯ ನಾನು ಮುಖ್ಯ ಮಂತ್ರಿಯಾದ್ರೆ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾನೆ. ಈ ಹಿಂದೆ ಸಿಎಂ ಆಗಿದ್ದಾಗ ಏಕೆ ಕೊಡಲಿಲ್ಲ? ಎಂದು ಪ್ರಶ್ನಿಸಿದರು. ಎಚ್.ಡಿ. ಕುಮಾರ ಸ್ವಾಮಿ ಸಹ ಏಕೆ ಕೊಡಲಿಲ್ಲ? ನಾವು ಈಗ ಐದು ಕೆಜಿ ಕೊಡುತ್ತಿದ್ದೇವೆ, ಅದನ್ನೇ ಮುಂದುವರಿಸುತ್ತೇವೆ ಎಂದರು.