ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಅರಸಾಳು ಎಂಬಲ್ಲಿ ವಯೋವೃದ್ಧೆಯೋರ್ವರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದು, ಜೀವನ ನಡೆಸಲು ಆಸರೆಯಾಗಬೇಕಿದ್ದ ಪತಿಯು ಇಹಲೋಕ ತ್ಯಜಿಸಿದ್ದಾರೆ. ಒಬ್ಬಂಟಿಯಾಗಿರುವ ಭಾಗ್ಯಲಕ್ಷ್ಮಿ ಎಂಬ ವೃದ್ದೆಯು ಸುಮಾರು 80 ವರ್ಷದವರಾಗಿದ್ದಾರೆ.ಹಳೆಯ ಜೋರಾಗಿ ಮಳೆ ಬಂದರೆ ಬಿದ್ದು ಹೋಗುವಂತಹ ಮನೆಯಲ್ಲಿ ವಾಸಿಸುತ್ತಿದ್ದಾರೆ.ಯಾರೂ ನೆರವಿಗೆ ಬಾರದೇ ಇರುವ ಕಾರಣ ದಯಮರಣಕ್ಕೆ ಸರ್ಕಾರದ ಬಳಿ ಮೊರೆಹೋಗುವತ್ತ ಚಿಂತಿಸಿದ್ದಾರೆ.
ತಮ್ಮ ಪತಿಯು ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದು,ಕೆಲವು ಕೌಟುಂಬಿಕ ಸಮಸ್ಯೆಯಿಂದ ಬರಬೇಕಾಗಿದ್ದ ಸರ್ಕಾರದ ಪಿಂಚಣಿ ಹಣ ಈ ವಯೋವೃದ್ದೆಯ ಕೈ ಸೇರುತ್ತಿಲ್ಲ.ಈ ವೃದ್ದೆಯು ಸ್ಥಳೀಯ ಎಲ್ಲಾ ಜನಪ್ರತಿನಿಧಿಗಳ ಹತ್ತಿರ ತಮ್ಮ ಅಳಲು ತೋಡಿಕೊಂಡಿದ್ದರು ಯಾರೂ ಕೂಡಾ ಸಹಾಯಕ್ಕೆ ಧಾವಿಸಿಲ್ಲ.
ಈ ವೃದ್ದೆಯ ಬಗ್ಗೆ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಅನೇಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.
ಹಲವು ಬಾರಿ ಅರಸಾಳು ಗ್ರಾಮ ಪಂಚಾಯಿತಿಗೆ ಹಳೆ ಮನೆಯನ್ನು ದುರಸ್ತಿಪಡಿಸಲು ಮನವಿ ಮಾಡಿದರು ಸರ್ಕಾರದ ಆದೇಶದ ಪ್ರಕಾರ ಸರ್ಕಾರಿ ನೌಕರರಿಗೆ ಹಾಗೂ ಸರಕಾರದ ಆದಾಯ ಪ್ರಮಾಣ ಪತ್ರದಲ್ಲಿ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳಿಗೆ ಮನೆಯ ದುರಸ್ತಿ ಹಾಗೂ ಮನೆ ನಿರ್ಮಿಸಲು ಅವಕಾಶವಿರುವುದಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸುತ್ತಾರೆ.
ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸಂದರ್ಭದಲ್ಲಿ ತಾವು ವಾಸವಾಗಿರುವ ಮನೆ ತುಂಬಾ ಜೇನು ಗೂಡು ಕಟ್ಟಿಕೊಂಡಿದೆ. ಈಗಿರುವ ಮನೆ ಇಂದು ಅಥವಾ ನಾಳೆಯೋ ಉರುಳಿ ಬೀಳುವುದರಲ್ಲಿ ಸಂಶಯವಿಲ್ಲ. ಈ ವೃದ್ದೆಯು ಕಳೆದ ಕೆಲವು ದಿನಗಳ ಹಿಂದೆ ಆತ್ಮಹತ್ಯೆಗೂ ಸಹ ಪ್ರಯತ್ನಿಸಿದ್ದರು. ಆದರೆ ಸ್ಥಳೀಯರ ಆಶಾಭಾವನೆಯ ಮಾತುಗಳಿಗೆ ಸ್ಪಂದಿಸಿ ಎದೆಗುಂದದೆ ಕೆಲ ದಿನ ಕಳೆದರು. ಆದರೂ ಸಮಸ್ಯೆ ಬಗೆಹರಿಯಲಿಲ್ಲ ಆದ್ದರಿಂದ ಜೀವನದ ಕಟ್ಟಕಡೆಯ ನಿರ್ಧಾರ ವೆಂಬಂತೆ ಇದೀಗ ಭಾಗ್ಯಲಕ್ಷ್ಮಿ ಎಂಬ ವೃದ್ದೆಯು ದಯಾಮರಣದ ಮೊರೆಹೋಗುವತ್ತ ಚಿಂತಿಸಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ವೃದ್ದೆಯ ಅಹವಾಲುಗಳಿಗೆ ಸ್ಪಂದಿಸಿ ನೆಮ್ಮದಿಯ ಜೀವನ ನಡೆಸಲು ವೃದ್ದೆಗೆ ಬರಬೇಕಾದ ಪಿಂಚಣಿ ಹಣ ಹಾಗೂ ವಾಸಿಸಲು ಮನೆಯನ್ನು ನಿರ್ಮಿಸಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ವರದಿ : ರಫ಼ಿ ರಿಪ್ಪನ್ ಪೇಟೆ