ರಿಪ್ಪನ್ ಪೇಟೆ: ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ನೂತನ ಸಚಿವರಾಗಿ ಮೊದಲ ಬಾರಿಗೆ ರಿಪ್ಪನ್ ಪೇಟೆಗೆ ಆಗಮಿಸಿದ ಶಿವಮೊಗ್ಗ ಉಸ್ತುವಾರಿ ಸಚಿವರಾದ ಕೆಎಸ್ ಈಶ್ವರಪ್ಪನವರು ಹಾಗೂ ಪ್ರಪ್ರಥಮವಾಗಿ ಸಚಿವರಾಗಿರುವ ಆರಗ ಜ್ಞಾನೇಂದ್ರ ರವರನ್ನು ರಿಪ್ಪನ್ ಪೇಟೆಯ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಡಗರದಿಂದ ಪಟಾಕಿ ಸಿಡಿಸಿ,ಸಾರ್ವಜನಿಕರಿಗೆ ಸಿಹಿ ಹಂಚಿ ಬರಮಾಡಿಕೊಂಡರು.
ರಿಪ್ಪನ್ ಪೇಟೆಯ ವಿನಾಯಕ ವೃತ್ತಕ್ಕೆ ಬಂದಿಳಿದ ಸಚಿವರುಗಳು ಅದ್ದೂರಿ ಸ್ವಾಗತ ಸ್ವೀಕರಿಸಿದ ನಂತರ ಗ್ರಾಮ ಪಂಚಾಯತ್ ವರೆಗೂ ಮೆರವಣಿಗೆ ಮೂಲಕ ಬಂದ ಸಚಿವರುಗಳಿಗೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ವತಿಯಿಂದ ಹೂಗುಚ್ಚ ನೀಡಿ ಸ್ವಾಗತಿಸಿದರು.
ನಂತರ ಗ್ರಾಮ ಪಂಚಾಯತ್ ಆವರಣದ ರಾಷ್ಟ್ರ ಕವಿ ಕುವೆಂಪು ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಹಾಗೂ ಸಾರ್ವಜನಿಕರ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಸ್ ಈಶ್ವರಪ್ಪ ರವರಿಗೆ ಮತ್ತು ಸಚಿವರಾದ ಆರಗ ಜ್ಞಾನೇಂದ್ರರವರಿಗೆ ಮತ್ತು ಎಂಎಸ್ಐಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಹರತಾಳು ಹಾಲಪ್ಪ ರವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಕೆ ಎಸ್ ಈಶ್ವರಪ್ಪರವರು ಅತಿವೃಷ್ಟಿ ಸಂಧರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಮೊದಲ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದಂತೆ ಎಲ್ಲಾ ಸಚಿವರು ಅವರ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವರದಿ ತಯಾರಿಸಿ ಸರಕಾರದ ಮೂಲಕ ಪರಿಹಾರ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿತ್ತು.
ಆ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 418 ಕೋಟಿ ರೂ ನಷ್ಟು ಹಾನಿಯಾಗಿದ್ದು ಈ ಸಂಬಂಧ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ನಂತರ ಮಾತನಾಡಿದ ಆರಗ ಜ್ಞಾನೇಂದ್ರರವರು ತೀರ್ಥಹಳ್ಳಿ ಕ್ಷೇತ್ರಕ್ಕೆ ಶಾಸಕನಾಗಿ ಸೀಮಿತನಾಗಿದ್ದ ನನಗೆ ಪಕ್ಷದ ಮುಖಂಡರು ಗುರುತಿಸಿ ಸಚಿವ ಸ್ಥಾನ ನೀಡಿ ಇಡೀ ರಾಜ್ಯದ ಜವಬ್ದಾರಿಯನ್ನು ಕೊಟ್ಟಿದ್ದಾರೆ ಆ ನಿಟ್ಟಿನಲ್ಲಿ ಇನ್ನುಳಿದ ಎರಡು ವರ್ಷಗಳಲ್ಲಿ ಕೈ ಮೀರಿ ಕೆಲಸ ಮಾಡುತ್ತೇನೆ.ಕೊರೊನಾ ಸಂಧರ್ಭದಲ್ಲಿ ಹಗಲಿರಲು ಶ್ರಮಿಸಿದ ಕೊರೊನಾ ವಾರಿಯರ್ಸ್ ಗಳಿಗೆ ಈ ಸಂಧರ್ಭದಲ್ಲಿ ಅಭಿನಂದನೆ ತಿಳಿಸಿದರು.
ಹರತಾಳು ಹಾಲಪ್ಪ ನವರು ಮಾತನಾಡಿ ಶಿವಮೊಗ್ಗ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕಿರುವುದು ನನಗೆ ತುಂಬಾ ಸಂತೋಷದ ವಿಷಯವಾಗಿದೆ.ಮುಂದಿನ ದಿನಗಳಲ್ಲಿ ಎಲ್ಲಾರೂ ಒಟ್ಟಾಗಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕೈ ಮೀರಿ ಶ್ರಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿರಾವ್,ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಅಣ್ಣಪ್ಪ ಹಾಗೂ ಎಲ್ಲಾ ಗ್ರಾಪಂ ಸದಸ್ಯರುಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್,ಮುಖಂಡರುಗಳಾದ ಆರ್ ಟಿ ಗೋಪಾಲ್,ಎಂ ಬಿ ಮಂಜುನಾಥ್, ನಾಗರಾಜ್ ಶೆಟ್ಟಿ, ಕಗ್ಗಲಿ ಲಿಂಗಪ್ಪ,ಸುರೇಶ್ ಸಿಂಗ್ ಹಾಗೂ ಗ್ರಾಪಂ ಪಿಡಿಒ ಚಂದ್ರಶೇಖರ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.