ತೀರ್ಥಹಳ್ಳಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರು ಮತ್ತು ಅವರ ಬೆಂಗಾವಲು ವಾಹನಗಳು ಹೋಗುತ್ತೀದ್ದಂತೆ ಹಿಂದಿದ್ದ ಓಮ್ನಿ ಕಾರೊಂದು ಪಲ್ಟಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಗುಡ್ಡೆಕೊಪ್ಪ ನಿವಾಸದಿಂದ ಕೊಪ್ಪದ ಕಡೆ ಗೃಹ ಸಚಿವರ ಕಾರು ಪಯಣ ಬೆಳೆಸಿತು. ಈ ವೇಳೆ ಡಿಸಿಸಿ ಬ್ಯಾಂಕ್ ಎದುರು ಕಾಯಿ ಮೂಟೆ ಹೊತ್ತಿದ್ದ ವ್ಯಕ್ತಿಯೊಬ್ಬ ಸಚಿವರ ಕಾರು ಪಾಸ್ ಆಗುತ್ತಿದ್ದಂತೆ ರಸ್ತೆಗೆ ಹಾರಿದ್ದಾನೆ. ಈ ವೇಳೆ ಓಮ್ನಿ ಕಾರು ಆತನಿಗೆ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಕಾರಿನಲ್ಲಿದ್ದ ಮೂವರು ಮತ್ತು ದಾರಿ ಹೋಕನಿಗೆ ಗಾಯವಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನವರು ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್ ಅವರ ಕುಟುಂಬದವರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಕಾರು ನುಜ್ಜುಗುಜ್ಜಾಗಿದೆ. ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಕೂಡಲೇ ಸ್ಥಳೀಯರು ಮತ್ತು ಅಲ್ಲಿದ್ದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ವರದಿ : ಪ್ರಶಾಂತ್ ಮೇಗರವಳ್ಳಿ