Headlines

ಗಣೇಶ ಚತುರ್ಥಿ, ಮೊಹರಂ ಹಬ್ಬ; ರಾಜ್ಯ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಬಿಡುಗಡೆ:

ಬೆಂಗಳೂರು: ಗಣೇಶ ಚತುರ್ಥಿ ಮತ್ತು ಮೊಹರಂ ಆಚರಿಸುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿನ ಹಬ್ಬಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದ್ದು, ಹಬ್ಬಗಳಲ್ಲಿ ಕೊರೊನಾ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಗಣೇಶ ಮೂರ್ತಿ ತರುವಾಗ ಮತ್ತು ವಿಸರ್ಜನೆ ವೇಳೆ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಗಣೇಶ ಹಬ್ಬ ಆಚರಿಸುವ ದೇಗುಲಗಳಲ್ಲಿ ನಿತ್ಯ ಸ್ಯಾನಿಟೈಸೇಷನ್ ನಡೆಸಬೇಕು. ದೇಗುಲಗಳಲ್ಲಿ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೇಗುಲಗಳಲ್ಲಿ ಭಕ್ತರಿಗೆ ಕನಿಷ್ಠ 6 ಅಡಿ ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಹೊರಾಂಗಣದಲ್ಲಿ ಚಪ್ಪರ, ಪೆಂಡಾಲ್ ಹಾಕುವಂತಿಲ್ಲ. ಚಪ್ಪರ, ಪೆಂಡಾಲ್, ಶಾಮಿಯಾನದ ವೇದಿಕೆ ನಿರ್ಮಿಸುವಂತಿಲ್ಲ. ವಿಸರ್ಜನೆ ವೇಳೆ ಮನರಂಜನೆ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ರಾಜ್ಯ ಸರ್ಕಾರ ನಿಯಮ ಜಾರಿಗೊಳಿಸಿದೆ.

ಮೊಹರಂ ಪ್ರಾರ್ಥನಾ ಸಭೆ, ಮೆರವಣಿಗೆಗೆ ನಿಷೇಧಿಸಲಾಗಿದೆ. ಸೂಕ್ತ ದೈಹಿಕ ಅಂತರ ಪಾಲಿಸಿ ಕನಿಷ್ಠ ಸಂಖ್ಯೆಯಲ್ಲಿ ಭಾಗಿಯಾಗಬಹುದಾಗಿದೆ. ಆಲಂ/ಪಂಜಾ, ತಾಜಿಯತ್​​ಗಳನ್ನು ಜನರು ಮುಟ್ಟುವಂತಿಲ್ಲ. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ 10 ವರ್ಷದೊಳಗಿನವರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಸೂಚನೆ ನೀಡಲಾಗಿದೆ. ಪ್ರಾರ್ಥನೆ ವೇಳೆ ಕನಿಷ್ಠ 6 ಅಡಿ ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಜ್ಯ ಸರ್ಕಾರ ಪ್ರಕಟಿಸಿರುವ ನಿಯಮಾವಳಿಯಲ್ಲಿ ಸೂಚಿಸಲಾಗಿದೆ.

Leave a Reply

Your email address will not be published. Required fields are marked *