ಬೆಂಗಳೂರು: ನನಗೆ ಕೇಂದ್ರ ನಾಯಕರಿಂದ ಯಾವುದೇ ಒತ್ತಡ ಬಂದಿಲ್ಲ. ಹೊಸಬರಿಗೆ ಅವಕಾಶ ಸಿಗಬೇಕೆಂದು ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹಂಗಾಮಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಎರಡು ವರ್ಷ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕೇಂದ್ರದ ನಾಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ನಡ್ಡಾ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದಿನ ಸಿಎಂಗೆ ಯಾರ ಹೆಸರನ್ನು ಸೂಚಿಸಿಲ್ಲ ಮತ್ತು ಸೂಚಿಸಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಪಾಲರಿಂದ ಬಿಎಸ್ ವೈ ರಾಜೀನಾಮೆ ಅಂಗೀಕಾರ:
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಬಿ ಎಸ್ ಯಡಿಯೂರಪ್ಪ ರವರ ರಾಜೀನಾಮೆ ಅಂಗೀಕರಿಸಿದ್ದಾರೆ.
ರಾಜ್ಯಪಾಲರಾಗ್ತಾರಾ ಬಿಎಸ್‍ವೈ?:
ಸಿಎಂ ಸ್ಥಾನದ ರಾಜೀನಾಮೆ ಬಳಿಕ ರಾಜ್ಯಪಾಲರಾಗ್ತೀರಾ ಪ್ರಶ್ನೆಗೆ ಉತ್ತರಿಸಿದರು. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿಯವರು ಕೇಂದ್ರ ಸಚಿವ ಸ್ಥಾನದ ಅವಕಾಶ ನೀಡಿದ್ರೂ ಹೋಗಿಲ್ಲ. ರಾಜ್ಯಪಾಲನಾಗಿ ಯಾವ ರಾಜ್ಯಕ್ಕೂ ಹೋಗಲ್ಲ. ರಾಜಕೀಯ ನಿವೃತ್ತಿಯೂ ಪಡೆಯಲ್ಲ. ಇಲ್ಲಿಯೇ ಇದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಿದರು.
ಯಾವುದೇ ಹೇಳಿಕೆ ನೀಡಬೇಡಿ:
ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದ್ರೆ ಸರ್ಕಾರ ಎರಡು ವರ್ಷ ಪೂರೈಸಿದ ದಿನವೇ ರಾಜೀನಾಮೆ ಸಲ್ಲಿಸೋದು ಸೂಕ್ತ ಅನ್ನಿಸಿತು. ರಾಷ್ಟ್ರೀಯ ನಾಯಕರು, ರಾಜ್ಯದ ಜನತೆ, ಪಕ್ಷದ ಕಾರ್ಯಕರ್ತರು ನನ್ನ ಮೇಲಿರಿಸಿದ್ದ ವಿಶ್ವಾಸವನ್ನ ಎಂದಿಗೂ ಮರೆಯಲ್ಲ. ಅನೇಕ ಸಾಧು-ಸಂತರು ಬಂದು ನನ್ನ ಮೇಲೆ ವಿಶ್ವಾಸ ಇರಿಸಿದ್ದಕ್ಕೆ ನಮಸ್ಕಾರ ಹೇಳುತ್ತೇನೆ. ಇಂದಿನಿಂದ ಸ್ವಾಮೀಜಿಗಳು ಯಾವುದೇ ಹೇಳಿಕೆ ನೀಡದಂತೆ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಈ ಎಲ್ಲ ಬೆಳವಣಿಗೆಯ ನಡುವೆ ಬುಧವಾರವೇ ಬಿಜೆಪಿ ಶಾಸಕರ ಸಭೆ ನಿಗದಿಯಾಗಿದ್ದು, ಅಂದೇ ನೂತನ ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಶಾಸಕರೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಂಭ್ರಮದ ದಿನದಂದೇ ನೋವಿನ ವಿದಾಯ:
75 ವರ್ಷ ವಯಸ್ಸಾಗಿದ್ರೂ ಪಕ್ಷ ನನಗೆ ಸಿಎಂ ಸ್ಥಾನ ನೀಡಿ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಈ ರಾಜೀನಾಮೆಯನ್ನು ನೋವಿನಂದಲ್ಲ, ಸಂತೋಷದಿಂದ ನೀಡುತ್ತಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಕೇಂದ್ರದ ನಾಯಕರು ಅಪೇಕ್ಷೆ ಹೊಂದಿದ್ದಾರೆ. ಮೋದಿ, ನಡ್ಡಾ ಮತ್ತು ಶಾ ಅವರಿಗೆ ಪದಗಳಲ್ಲಿ ಅಭಿನಂದನೆ ಸಲ್ಲಿಸಲು ಆಗಲ್ಲ. ಮತ್ತೆ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..