ಶಿವಮೊಗ್ಗ: ಇಲ್ಲಿನ ಗೋಪಿ ಸರ್ಕಲ್ ನಲ್ಲಿ ನಾಗರಿಕ ಹಿತಾಸಕ್ತಿಯ ರಕ್ಷಣಾ ಒಕ್ಕೂಟ ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಪೋಸ್ಟ್ ಕಾರ್ಡ್ ಚಳುವಳಿಯನ್ನು ನಡೆಸಿತು.
ಕೋವಿಡ್ ಸಂಕಷ್ಟ ಕಾಲದಲ್ಲಿ ಲಾಕ್ಡೌನ್ ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಇರುವಂತಹ ಇಂತಹ ಸಂದರ್ಭದಲ್ಲಿ, ಗಾಯದ ಮೇಲೆ ಬರೆ ಎಳೆಯುವಂತೆ 2021- 22 ನೇ ಸಾಲಿನ ಆಸ್ತಿ ತೆರಿಗೆಯನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ಅವೈಜ್ಞಾನಿಕವಾಗಿ ಹೆಚ್ಚಿಸಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಎಸ್ಸಾರ್ ದರ ಆಧರಿಸಿ ವಾಸದ ಮನೆ, ವಾಣಿಜ್ಯ ಕಟ್ಟಡಗಳು, ಕೈಗಾರಿಕೆಗಳು ಹಾಗೂ ಖಾಲಿ ನಿವೇಶನಗಳ ಮೇಲೆ ಹಿಂದಿನ ವಾರ್ಷಿಕ ತೆರಿಗೆ ಗಿಂತ ಹಲವು ಪಟ್ಟು ಹೆಚ್ಚು ತೆರಿಗೆ ವಿಧಿಸಿರುವುದು ತೆರಿಗೆದಾರರ ಮೇಲಿನ ಗದಾಪ್ರಹಾರ ವಾಗಿದೆ ಎಂದು ಪ್ರತಿಭಟನಾಕಾರರು ಬೇಸರಿಸಿದರು.
ಹಲವು ರಾಜ್ಯಗಳಲ್ಲಿ ಆಸ್ತಿತೆರಿಗೆ ಮೇಲೆ ಶೇಕಡ 50 ರಷ್ಟು ವಿನಾಯಿತಿ ಇದೆ ಆದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಅವೈಜ್ಞಾನಿಕವಾದ ಎಸ್ಸಾರ್ ಕಾಯ್ದೆ ಹಿಂಪಡೆಯಬೇಕು, ಶೇಕಡಾ 50ರಷ್ಟು ವಿನಾಯಿತಿಯನ್ನು ಸ್ವಯಂಘೋಷಿತ ಆಸ್ತಿ ತೆರಿಗೆ ಮೇಲೆ ನೀಡಬೇಕು, ಆಸ್ತಿ ತೆರಿಗೆ ತಿದ್ದುಪಡೆಯ ಮಸೂದೆಯನ್ನು
ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಪೋಸ್ಟ್ ಕಾರ್ಡ್ ಚಳುವಳಿಯಲ್ಲಿ ತಿಳಿಸಿದರು.
ವರದಿ: ರಾಮನಾಥ್