ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಮರುನಾಮಕರಣ: ಲಕ್ಷಣ ಸವದಿ

ಬೆಂಗಳೂರು: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಮರುನಾಮಕರಣ ಮಾಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈ ಆದೇಶ ತಕ್ಷಣದಿಂದಲೇ ಅನ್ವಯವಾಗಲಿದ್ದು, ಇನ್ನುಮುಂದೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು (North Eastern Karnataka Road Transport Corporation) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಕರೆಯುವುದಾಗಿ ಮಾಹಿತಿ ನೀಡಿದ್ದಾರೆ.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣವಾದ ನಂತರ ಈಶಾನ್ಯ ಸಾರಿಗೆಗೂ ಈ ರೀತಿ ಮರು ನಾಮಕರಣ ಮಾಡಬೇಕೆಂದು ಬಹುದಿನಗಳ ಬೇಡಿಕೆ ಸ್ಥಳೀಯರಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಕ್ರಮ ಕೈಗೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಎಂದು ಈಶಾನ್ಯ ಸಾರಿಗೆ ನಿಗಮಕ್ಕೆ ಮರುನಾಮಕರಣ ಮಾಡಲಾಗುತ್ತಿದೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಮಹಿಳೆಯರಿಗಾಗಿ ವಿನೂತನ ಬಸ್

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ, ಮಹಿಳೆಯರಿಗೆ ಬಸ್​ನಲ್ಲಿಯೇ ಶೌಚಾಲಯ, ಸ್ನಾನಗೃಹ, ಹಾಲುಣಿಸಲು ಸೌಲಭ್ಯ, ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ ಮಾಡಿ ಮಾದರಿಯಾಗಿದ್ದಾರೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ, ಯಾದಗಿರಿ ವರ್ಕ್​ಶಾಪ್​ನಲ್ಲಿ ಮಹಿಳೆಯರಿಗಾಗಿಯೇ ವಿನೂತನ ಬಸ್ ಅನ್ನು ಸಿದ್ಧಗೊಳಿಸಲಾಗಿದೆ. ಸಂಸ್ಥೆಯಲ್ಲಿ ನಿರುಪಯುಕ್ತವಾಗಿದ್ದ ಬಸ್ ಅನ್ನು ಮಹಿಳಾ ಶೌಚಾಲಯದ ಬಸ್ ಆಗಿ ಪರಿವರ್ತನೆ ಮಾಡಲಾಗಿದೆ. ಸಾವಿರಾರು ಕಿಲೋ ಮೀಟರ್ ಓಡಿದ ನಂತರ, ಕೆಲ ಬಸ್​ಗಳನ್ನು ಓಡಿಸಲು ಆಗುವುದಿಲ್ಲ. ಅಂತಹ ಬಸ್​ವೊಂದನ್ನು ಪಡೆದು, ಅದನ್ನು ಬದಲಾಯಿಸಿ ಮಹಿಳಾ ಬಸ್ ಅನ್ನು ಸಿದ್ಧಗೊಳಿಸಿದ್ದಾರೆ. ಬಸ್​ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸರಿಸುಮಾರು ಎರಡು ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಸಂಸ್ಥೆಯ ವರ್ಕ್​ಶಾಪ್ ಸಿಬ್ಬಂದಿ ನಿರಂತರ ಶ್ರಮ ವಹಿಸಿ, ನಿರುಪಯುಕ್ತ ಬಸ್​ ಅನ್ನು ಉಪಯುಕ್ತ ಬಸ್ ಆಗಿ ಮಾಡಿದ್ದಾರೆ.

ಈ ಬಸ್​ನ ವಿಶೇಷತೆ ಏನು?
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಈ ಬಸ್ ಮಹಿಳಾ ಪ್ರಯಾಣಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿದೆ. ಅಂದರೆ ಬಸ್ ನಿಲ್ದಾಣದಲ್ಲಿ ಈಗಿರುವ ಶೌಚಗೃಹಗಳನ್ನು ಬಳಕೆ ಮಾಡಲು ಅನೇಕರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛ ಮತ್ತು ಸುಂದರವಾದ ಮಹಿಳಾ ಶೌಚಾಲಾಯ, ಸ್ನಾನಗೃಹ, ಹಾಲುಣಿಸುವ ಕೋಣೆಯನ್ನು ಬಸ್​ನಲ್ಲಿ ಸಿದ್ಧಮಾಡಲಾಗಿದೆ. ಒಂದು ಬಸ್​ನಲ್ಲಿ ಎರಡು ದೇಶಿಯ ಶೌಚಾಲಯ, ಒಂದು ವಿದೇಶಿ ಶೌಚಾಲಯ, ಕೈ ತೊಳೆಯುವ ಕೋಣೆ, ಸ್ನಾನಗೃಹ ಕೋಣೆ, ಜತೆಗೆ ಪುಟ್ಟ ಮಕ್ಕಳಿಗೆ ಹಾಲುಣಿಸಲು ಕೋಣೆಯೊಂದನ್ನು ಮಾಡಲಾಗಿದೆ. ವಿಶೇಷವೆಂದರೆ ಸ್ನಾನಗೃಹದಲ್ಲಿ ಗೀಜರ್ ಕೂಡಿಸಿದ್ದು, ಬಿಸಿನೀರು ಕೂಡಾ ಬರಲಿದೆ. ಮಹಿಳಾ ಪ್ರಯಾಣಿಕರು ಶೌಚ, ಸ್ನಾನ ಮಾಡಿ, ಬಟ್ಟೆ ಬದಲಾಯಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಜತೆಗೆ ಸ್ಯಾನಿಟರಿ ನ್ಯಾಪಕಿನ್ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ. ಬಸ್​ನ ಮೇಲೆ ಸೋಲಾರ್​ ವ್ಯವಸ್ಥೆ ಇದ್ದು, ವಿದ್ಯುತ್ ಪೂರಕೆಯಾಗುತ್ತದೆ. ಹೀಗಾಗಿ ಪ್ರತಿಯೊಂದು ಕೋಣೆಗೂ ಫ್ಯಾನ್ ಕೂಡಾ ಹಾಕಲಾಗಿದೆ. ಬಸ್​ನ ಮೇಲ್ಭಾಗದಲ್ಲಿ ನೀರಿನ ಟ್ಯಾಂಕ್ ಕೂರಿಸಿದ್ದು, ಅಲ್ಲಿಂದ ಶೌಚಗೃಹಕ್ಕೆ, ಸ್ನಾನ ಗೃಹಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಬಸ್ ನಿಲ್ದಾಣಕ್ಕೆ ಮಾತ್ರ ಈ ಬಸ್ ಸೀಮಿತ
ಮಹಿಳಾ ಶೌಚಾಲಯ, ಸ್ನಾನಗೃಹ ಇರುವ ಈ ಬಸ್ ಬೇರಡೆ ಹೋಗುವುದಿಲ್ಲ. ಬದಲಾಗಿ ಬಸ್ ನಿಲ್ದಾಣದಲ್ಲಿಯೇ ನಿಲ್ಲಲಿದೆ. ಹೆಚ್ಚಿನ ಜನದಟ್ಟಣೆ ಇರುವ ಕಲಬುರಗಿಯಲ್ಲಿ ಇಂದಿನಿಂದ (ಜುಲೈ 7) ಈ ಬಸ್ ಬಳಕೆಗೆ ಮುಕ್ತವಾಗಲಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಬಸ್​ಗೆ ಇಂದು ಚಾಲನೆ ನೀಡಲಿದ್ದಾರೆ. ಈ ಸೌಲಭ್ಯಗಳನ್ನು ಪಡೆಯಬೇಕಾದರೆ ಐದರಿಂದ ಹತ್ತು ರೂಪಾಯಿ ಹಣ ನಿಗದಿ ಮಾಡಲು ಸಂಸ್ಥೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಏಕೆಂದರೆ ಬಸ್​ಗೆ ಒಬ್ಬರು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸ್ವಚ್ಚತೆ ಕಾಪಾಡಿಕೊಳ್ಳಬೇಕಾದರೆ ಕೆಲಸಗಾರರ ಅವಶ್ಯಕತೆ ಇದೆ. ಹೀಗಾಗಿ ಪ್ರತಿ ಪ್ರಯಾಣಿಕರಿಗೆ ಐದು ರೂಪಾಯಿ ಪಡೆದು ಈ ಸೌಲಭ್ಯವನ್ನು ಬಳಸಿಕೊಳ್ಳಲು ಮಹಿಳಾ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಸಂಸ್ಥೆಯ ಅಧಿಕಾರಿಗಳು ಮುಂದಾಗಿದ್ದಾರೆ.

ವರದಿ: ರಾಮನಾಥ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *