ಅದಾನಿ ಸಮೂಹದ ಆರು ಕಂಪೆನಿಗಳಲ್ಲಿ ವಿದೇಶಿ ಫಂಡ್ಗಳ ಹೂಡಿಕೆ ಬಗ್ಗೆ ಎದ್ದ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ವರದಿಗಳು ಬಂದ ಮೇಲೆ ಭಾರತದ ಶತಕೋಟ್ಯಧಿಪತಿ- ಉದ್ಯಮಿ ಗೌತಮ್ ಅದಾನಿ ಆಸ್ತಿಯಲ್ಲಿ ಭಾರೀ ಇಳಿಕೆ ಮುಂದುವರಿದಿದೆ. ಈ ವಾರದಲ್ಲಿ (ಸೋಮವಾರದಿಂದ ಬುಧವಾರದ ತನಕ- 3 ದಿನದಲ್ಲಿ) 900 ಕೋಟಿ ಅಮೆರಿಕನ್ ಡಾಲರ್ನಷ್ಟು ಆಸ್ತಿಯನ್ನು ಕಳೆದುಕೊಂಡು, ನಿವ್ವಳ ಮೌಲ್ಯ 6760 ಕೋಟಿ ಯುಎಸ್ಡಿಗೆ ತಲುಪಿದ್ದಾರೆ 58 ವರ್ಷದ ಗೌತಮ್ ಅದಾನಿ. ಹಾಗಿದ್ದರೆ ನಷ್ಟ ಎಷ್ಟಾಗಿದೆ ಅಂತ ನೋಡುವುದಾದರೆ, 66,600 ಕೋಟಿ ರೂಪಾಯಿಗೂ ಹೆಚ್ಚು, ಪ್ರತಿ ಗಂಟೆಗೆ 925 ಕೋಟಿಗೂ ಹೆಚ್ಚು, ಇನ್ನು ನಿಮಿಷಕ್ಕೆ 15.41 ಕೋಟಿಗೂ ಹೆಚ್ಚು ಸಂಪತ್ತು ಕರಗಿದೆ. ಬುಧವಾರ ದಿನದ ಕೊನೆಗೆ ಬ್ಲೂಮ್ಬರ್ಗ್ ಅಂಕಿ-ಅಂಶದ ಮೂಲಕ ತಿಳಿದುಬಂದಿರುವ ಲೆಕ್ಕಾಚಾರ ಇದಾಗಿದೆ. ಗುರುವಾರ ಕೂಡ ಸಂಪತ್ತು ಇನ್ನಷ್ಟು ಕರಗಿದೆ. ಆ ಲೆಕ್ಕ ಇದರಲ್ಲಿ ಸೇರಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಏಷ್ಯಾದ ಎರಡನೇ ಶ್ರೀಮಂತರೆನಿಸಿಕೊಂಡ ಗೌತಮ್, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ನಂತರದ ಸ್ಥಾನ ತಲುಪಿಕೊಂಡರು.
ಬೆಂಕಿಗೆ ತಾಗಿದ ಕರ್ಪೂರ ಆಯಿತು ಅದಾನಿಯ 66000 ಕೋಟಿ ರೂ. ಆಸ್ತಿ::::::::::
ಮಾಲೀಕರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂಬ ಕಾರಣಕ್ಕೆ ಎನ್ಎಸ್ಇ ಡೆಪಾಸಿಟರಿಯಿಂದ ಮಾರಿಷಿಯಸ್ ಮೂಲದ ಮೂರು ಫಂಡ್ಗಳ ಡಿಮ್ಯಾಟ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಅವು ಅದಾನಿ ಸಮೂಹದ ಪ್ರಮುಖ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಫಂಡ್ಗಳಾಗಿವೆ ಎಂದು ಎಕನಾಮಿಕ್ ಟೈಮ್ಸ್ನಲ್ಲಿ ವರದಿ ಬಂದ ಮೇಲೆ, ಸೋಮವಾರದಿಂದ (ಜೂನ್ 14, 2021) ಕಂಪೆನಿಯ ಷೇರುಗಳಲ್ಲಿನ ಬೆಲೆ ಕುಸಿತ ಶುರುವಾಯಿತು. ಅಲ್ಬುಲಾ ಇನ್ವೆಸ್ಟ್ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್ಮೆಂಟ್ ಫಂಡ್- ಈ ಮೂರೂ ಸೇರಿ ಅದಾನಿಗೆ ಸೇರಿದ ಕಂಪೆನಿಗಳಲ್ಲಿ 600 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಷೇರುಗಳನ್ನು ಹೊಂದಿವೆ. ಆದರೆ ಮಾಧ್ಯಮಗಳಲ್ಲಿ ಬಂದ ವರದಿ ತಪ್ಪಿನಿಂದ ಕೂಡಿರುವಂಥದ್ದು ಎಂದು ಅದಾನಿ ಸಮೂಹದಿಂದ ಹೇಳಲಾಯಿತು. ಉದ್ದೇಶಪೂರ್ವಕವಾಗಿ ಹೂಡಿಕೆದಾರರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿತು.
ಆದರೆ ಹೂಡಿಕೆದಾರರು ಪಾರದರ್ಶಕತೆ ಬಗ್ಗೆ ಆತಂಕಕ್ಕೆ ಒಳಗಾಗಿ, ಕಂಪೆನಿಯ ಷೇರುಗಳನ್ನು ಮಾರಿ, ಹೊರಬರುತ್ತಿದ್ದಾರೆ.
ಮಾರಿಷಿಯಸ್ ಮೂಲದ 3 ಫಂಡ್ಗಳು ತಮ್ಮ ಆಸ್ತಿಯಲ್ಲಿ ಶೇ 90ಕ್ಕೂ ಹೆಚ್ಚು ಮೊತ್ತವನ್ನು ಅದಾನಿ ಸಮೂಹದ ಕಂಪೆನಿಗಳಲ್ಲಿ ಹೂಡಿಕೆ ಮಾಡಿವೆ ಎಂದು ಬ್ಲೂಮ್ಬರ್ಗ್ ಇಂಟೆಲಿಜೆನ್ಸ್ ಹೇಳಿದೆ. ಅಂತಿಮವಾಗಿ ಷೇರುಗಳ ಮಾಲೀಕರು ಯಾರು ಎಂಬ ಬಗ್ಗೆ ಸ್ಪಷ್ಟತೆ ದೊರೆಯಬೇಕಿದೆ ಎಂದು ಸ್ವತಂತ್ರ ವಿಶ್ಲೇಷಕರೊಬ್ಬರು ಹೇಳಿದ್ದಾರೆ. ಎಕ್ಸ್ಚೇಂಜ್ ಫೈಲಿಂಗ್ಸ್ನಲ್ಲಿ ಈ ವಾರ ತಿಳಿಸಿರುವುದನ್ನು ಹೊರತುಪಡಿಸಿ, ಬೇರೆ ಯಾವುದೇ ಮಾಹಿತಿ ನೀಡಲು ಅದಾನಿ ಸಮೂಹ ವಕ್ತಾರರು ನಿರಾಕರಿಸಿದ್ದಾರೆ. ವಿದೇಶೀ ಹೂಡಿಕೆದಾರರು ಅದಾನಿ ಎಂಟರ್ಪ್ರೈಸಸ್ನಲ್ಲಿ ದಶಕಗಳಿಗೂ ಹೆಚ್ಚು ಕಾಲದಿಂದ ಹೂಡಿಕೆ ಮಾಡುತ್ತಿದ್ದಾರೆ ಎಂದು ಜೂನ್ 14ರ ಹೇಳಿಕೆಯಲ್ಲಿ ತಿಳಿಸಲಾಗಿದೆ.