ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಬಿಜೆಪಿ ತಲೆ ತಗ್ಗಿಸುವಂತೆ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಶ್ಲೀಲ ಸಿಡಿ ಪ್ರಕರಣದ ಸಂತ್ರಸ್ಥೆ ಯುವತಿ ಪರ ಅಂತಾರಾಷ್ಟ್ರೀಯ ಖ್ಯಾತಿಯ ಮಾನವ ಹಕ್ಕು ಹೋರಾಟಗಾರ್ತಿ ಇಂದಿರಾ ಜೈಸಿಂಗ್ ಕಣಕ್ಕಿಳಿದಿದ್ದು, ರಮೇಶ್ ಜಾರಕಿಹೊಳಿ ಎದೆಯಲ್ಲಿ ನಡುಕ ಆರಂಭವಾಗಿದೆ.
ಇತ್ತೀಚಿಗಷ್ಟೇ ಪ್ರಕರಣದ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ಥ ಯುವತಿ ಎಸ್ಐಟಿ ತನಿಖೆಯಲ್ಲಿ ನನಗೆ ನಂಬಿಕೆ ಇಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಮೇಶ್ ಜಾರಕಿಹೊಳಿ ಹಾಗೂ ಎಸ್ಐಟಿಗೆ ನೊಟೀಸ್ ಜಾರಿ ಮಾಡಿತ್ತು.
ಇದರ ಬೆನ್ನಲ್ಲೇ ಯುವತಿ ಪರ ವಾದ ಮಂಡಿಸಲು ಪದ್ಮಶ್ರೀ ಪುರಸ್ಕೃತ ಮಾನವ ಹಕ್ಕುಹೋರಾಟಗಾರ್ತಿ, ವಕೀಲೆ ಹಾಗೂ ಅಡಿಷನ್ ಸಾಲಿಟರ್ ಜನರಲ್ ಹುದ್ದೆ ಅಲಂಕರಿಸಿದ ಮೊದಲ ಮಹಿಳಾ ವಕೀಲೆ ಎಂಬ ಖ್ಯಾತಿಯ ಇಂದಿರಾ ಜೈಸಿಂಗ್ ಹೈಕೋರ್ಟ್ ನಲ್ಲಿ ಯುವತಿ ಪರ ವಾದ ಮಂಡಿಸಲು ಅನುಮತಿ ಕೋರಿದ್ದಾರೆ.
ಲಿಂಗ ಅಸಮಾನತೆ ಸೇರಿದಂತೆ ಹಲವು ಹೋರಾಟಗಳ ಮೂಲಕವೇ ಮುನ್ನಲೆಗೆ ಬಂದ ಇಂದಿರಾ ಜೈಸಿಂಗ್ ಎಂಟ್ರಿಯಿಂದ ಅಶ್ಲೀಲ ಸಿಡಿ ಪ್ರಕರಣದ ತನಿಖೆ ಹಾಗೂ ರಮೇಶ್ ಜಾರಕಿಹೊಳಿ ಭವಿಷ್ಯ ಎರಡಕ್ಕೂ ಸಾಕಷ್ಟು ಸವಾಲುಗಳು ಕಾದಿವೆ ಎಂದು ಕಾನೂನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
81 ವರ್ಷದ ಇಂದಿರಾ ಜೈಸಿಂಗ್ ಮುಂಬೈನ ಸಿಂಧಿ ಕುಟುಂಬದಲ್ಲಿ ಜನಿಸಿದ್ದು, 1962 ರಲ್ಲಿ ಬೆಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಮಾನವ ಹಕ್ಕು ಹೋರಾಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇಂದಿರಾ ಜೈಸಿಂಗ್ ಎಸ್ಐಟಿ ತನಿಖೆ ಪ್ರಶ್ನಿಸಿ ಯುವತಿ ಸಲ್ಲಿಸಿರುವ ಅರ್ಜಿ ಹಾಗೂ ಪಿಐಎಲ್ ಅರ್ಜಿ ಪರ ವಾದ ಮಂಡಿಸಲಿದ್ದಾರೆ.
ಮೊದಲ ವಾದ ಮಂಡನೆಯಲ್ಲೇ ಎಸ್ಐಟಿಗೆ ತಿರುಗೇಟು ನೀಡಿರುವ ಇಂದಿರಾ ಜೈಸಿಂಗ್ ಹೈಕೋರ್ಟ್ ಅನುಮತಿ ಇಲ್ಲದೇ ಪ್ರಕರಣದ ತನಿಖೆ ಮುಗಿಸಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಸರ್ಕಾರಿ ಪರ ವಕೀಲರು ತನಿಖೆ ಮುಗಿದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಯುವತಿ ಸಿಬಿಐ ತನಿಖೆಗೆ ಆಗ್ರಹಿಸಿರೋ ಅರ್ಜಿಗೆ ರಮೇಶ್ ಜಾರಕಿಹೊಳಿ ಪರ ವಕೀಲ ಸಿ.ವಿ.ನಾಗೇಶ್ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಅಶ್ಲೀಲ ಸಿಡಿ ಪ್ರಕರಣದಲ್ಲಿ ಇಂದಿರಾ ಜೈಸಿಂಗ್ ರಂತಹ ಹೆಸರಾಂತ ವಕೀಲರು ವಾದ ಮಂಡಿಸಲು ಮುಂದಾಗಿರುವುದು ಪ್ರಕರಣಕ್ಕೆ ಹಲವು ಆಯಾಮ ನೀಡಿದ್ದು, ಬೇರ್ಯಾವುದೋ ಅದೃಶ್ಯ ಶಕ್ತಿ ಸಂತ್ರಸ್ಥ ಯುವತಿಯ ಬೆಂಬಲಕ್ಕೆ ನಿಂತಿದ್ಯಾ? ಈ ಪ್ರಕರಣದಲ್ಲಿ ರಾಜಕೀಯ ಲೆಕ್ಕಾಚಾರಗಳು ಸೇರಿಕೊಂಡಿದ್ಯಾ ಅನ್ನೋ ಅನುಮಾನವನ್ನು ಹುಟ್ಟುಹಾಕಿದೆ.