RIPPONPETE | ಹಿರಿಯ ಆಟೋ ಚಾಲಕ ದ್ಯಾವಪ್ಪಗೌಡ ರ 75ನೇ ಜನ್ಮದಿನೋತ್ಸವ ಆಚರಿಸಿ ಸಂಭ್ರಮಿಸಿದ ಯುವಕರು
ರಿಪ್ಪನ್ ಪೇಟೆ, ಜುಲೈ 25: ಪಟ್ಟಣದ ಹಿರಿಯ ಆಟೋ ಚಾಲಕರಾಗಿರುವ ದ್ಯಾವಪ್ಪ ಗೌಡ ಅವರ 75ನೇ ಹುಟ್ಟುಹಬ್ಬವನ್ನು ರಿಪ್ಪನ್ ಪೇಟೆ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಶ್ರದ್ದಾ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಸ್ಥಳೀಯ ಆಟೋ ನಿಲ್ದಾಣದಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಸಹಚರ ಚಾಲಕರು ಭಾಗವಹಿಸಿ, ದ್ಯಾವಪ್ಪ ಗೌಡರಿಗೆ ಸನ್ಮಾನ ಸಲ್ಲಿಸಿ ಗೌರವ ವ್ಯಕ್ತಪಡಿಸಿದರು. ಹೂಮಾಲೆ ಅರ್ಪಿಸಿಸ ಕೆಕ್ ಕತ್ತರಿಸುವ ಮೂಲಕ ಜನ್ಮದಿನದ ಸಂಭ್ರಮಾಚರಿಸಿ ಸಿಹಿ ಹಂಚಲಾಯಿತು.
ಈ ಸಂದರ್ಭ ಮಾತನಾಡಿದ ಆಟೋ ಚಾಲಕ ಪುರುಷೋತ್ತಮ್ ಅವರು, “ದ್ಯಾವಪ್ಪ ಗೌಡರು ಆಟೋ ವೃತ್ತಿಗೆ ನಿಷ್ಠೆ, ಶ್ರದ್ಧೆ ಮತ್ತು ಸರಳ ಬದುಕಿನ ಮಾದರಿಯಾಗಿದ್ದಾರೆ. ಅವರು ಹೊಸ ತಲೆಮಾರಿಗೆ ಪ್ರೇರಣೆಯಾಗಿದ್ದಾರೆ,” ಎಂದು ಹೇಳಿದರು.
ಯುವ ಆಟೋ ಚಾಲಕ ಅಬ್ದುಲ್ ಖಾದರ್ ಮಾತನಾಡಿ ದ್ಯಾವಪ್ಪ ಗೌಡರು ಕೇವಲ ಚಾಲಕರಲ್ಲ, ನಮ್ಮೆಲ್ಲರ ಬದುಕಿಗೆ ಒಂದು ಸ್ಫೂರ್ತಿ. ಅವರು ಪ್ರತಿದಿನವೂ ಬೆಳಿಗ್ಗೆ 4 ಗಂಟೆಗೆ ಕೆಲಸಕ್ಕೆ ಹಾಜರಾಗುವ ಸಮಯ ನಿಷ್ಠೆ ಹಾಗೂ ಅವರ ಮೃದು ಸ್ವಭಾವದಿಂದ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ,” ಎಂದರು.
ಕಾರ್ಯಕ್ರಮದಲ್ಲಿ ಹಲವು ಆಟೋ ಚಾಲಕರು, ಮಾಲೀಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
 
                         
                         
                         
                         
                         
                         
                         
                         
                         
                        