ದುಬಾರಿ ಗಿಫ್ಟ್ ಬಂದಿದೆ ಎಂದು ವಿದೇಶದಿಂದ ಬಂದ ಕರೆ ಹಾಗೂ ಮೆಸೇಜ್ ಗೆ ಸ್ಪಂದಿಸಿದ ವ್ಯಕ್ತಿಗೆ ಕಾದಿತ್ತು ಬಿಗ್ ಶಾಕ್..!!
ಶಿವಮೊಗ್ಗ : ಲಂಡನ್‌ನಿಂದ ಬೆಲೆ ಬಾಳುವ ಗಿಫ್ಟ್ ಬಂದಿದೆ ಎಂದು ನಂಬಿಸಿ ಭದ್ರಾವತಿಯ ವ್ಯಕ್ತಿಯೊಬ್ಬರಿಗೆ 8.56 ಲಕ್ಷ ರೂ. ವಂಚಿಸಲಾಗಿದೆ. ಇದೇ ಮಾದರಿ ಈ ಹಿಂದೆಯು ಹಲವರಿಗೆ ವಂಚನೆಯಾಗಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.
ಲಂಡನ್‌ನಿಂದ ಮೈಕಲ್ ಮ್ಯಾಕ್‌ಡೊನಾಲ್ಡ್ ಹೆಸರಿನಲ್ಲಿ ಕರೆ ಮತ್ತು ಮೆಸೇಜ್ ಮಾಡಿ 43 ಲಕ್ಷ ರೂ. ಮೌಲ್ಯದ ಗಿಫ್ಟ್ ಕಳುಹಿಸುತ್ತಿರುವುದಾಗಿ ಭದ್ರಾವತಿಯ ವ್ಯಕ್ತಿಗೆ ನಂಬಿಸಿದ್ದ. ಗಿಫ್ಟ್ ಕಳುಹಿಸಲು ಕಂಪನಿಯ ವೇಯ್ಟಿಂಗ್ ಚಾರ್ಜ್ 5 ಸಾವಿರ ರೂ. ಪಾವತಿಸುವಂತೆ ತಿಳಿಸಿ, ಬ್ಯಾಂಕ್ ಖಾತೆ ಮತ್ತು ಗೂಗಲ್ ಪೇ ನಂಬರ್ ಕಳುಹಿಸಿದ್ದ. ಭದ್ರಾವತಿಯ ವ್ಯಕ್ತಿ ಈ ಖಾತೆಗಳಿಗೆ ಹಣ ಕಳುಹಿಸಿದ್ದರು. ಬಳಿಕ ವಿವಿಧ ಚಾರ್ಜ್‌ಗಳ ಹೆಸರಿನಲ್ಲಿ ಒಟ್ಟು 6.53 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಸ್ವಲ್ಪ ದಿನದ ಬಳಿಕ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿ ಲಕ್ಷಾಂತರ ಮೌಲ್ಯದ ಗಿಫ್ಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಪಡೆದುಕೊಳ್ಳಲು 2.03 ಲಕ್ಷ ರೂ. ಪಾವತಿಸಬೇಕು ಎಂದು ತಿಳಿಸಿದ್ದು, ವಿವಿಧ ನಂಬರ್‌ಗಳಿಂದ ಕರೆ ಮಾಡಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದರು.
ಒಟ್ಟು 8.56 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡಿದ್ದರೂ ಗಿಫ್ಟ್ ಬಾರದಿದ್ದರಿಂದ ಅನುಮಾನಗೊಂಡು ಪರಿಚಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A big shock awaited the person who responded to a call and message from abroad saying he had received an expensive gift..!!