Shivamogga | ಹಿಂದುಳಿದವರ ಮತ ವಿಭಜನೆಗಾಗಿ ಯಡಿಯೂರಪ್ಪನವರೇ ಈಶ್ವರಪ್ಪರನ್ನು ಚುನಾವಣೆಗೆ ನಿಲ್ಲಿಸುತಿದ್ದಾರೆ – ಆಯನೂರು ಮಂಜುನಾಥ್

ಹಿಂದುಳಿದವರ ಮತ ವಿಭಜನೆಗಾಗಿ ಯಡಿಯೂರಪ್ಪನವರೇ ಈಶ್ವರಪ್ಪರನ್ನು ಚುನಾವಣೆಗೆ ನಿಲ್ಲಿಸುತಿದ್ದಾರೆ – ಆಯನೂರು ಮಂಜುನಾಥ್

ಹಿಂದುಳಿದವರ ಮತ ವಿಭಜನೆ ಆದಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಗೆಲುವು ಸುಲಭ ಎಂಬ ಕಾರಣಕ್ಕೆ ಕೆ.ಎಸ್. ಈಶ್ವರಪ್ಪ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯನ್ನಾಗಿ ಬಿಜೆಪಿ ಮುಖಂಡ ಬಿ.ಎಸ್‌. ಯಡಿಯೂರಪ್ಪ ಅವರೇ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಡಮ್ಮಿ’ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಅವರು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಈಶ್ವರಪ್ಪ ಅವರದ್ದು ಹುಸಿ ಬಂಡಾಯ. ಬಿಜೆಪಿಯಲ್ಲಿರುವ ನನ್ನ ಹಳೆಯ ಸ್ನೇಹಿತರು ಹೇಳುವಂತೆ, ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಗೆಲ್ಲಿಸಲು ಯಡಿಯೂರಪ್ಪ- ಈಶ್ವರಪ್ಪ ನಡುವೆ ಒಳ ಒಪ್ಪಂದ ಆಗಿದೆ. ಅದರಂತೆ ಚುನಾವಣೆ ಮುಗಿದ ನಂತರ ಕೆ.ಎಸ್.ಈಶ್ವರಪ್ಪ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ನೇಮಕಗೊಳ್ಳಲಿದ್ದಾರೆ. ಅವರ ಪುತ್ರ ಕೆ.ಈ. ಕಾಂತೇಶ ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಲಾಗುತ್ತದೆ ಎಂದರು.

‘ಈಶ್ವರಪ್ಪ ದೊಡ್ಡ ಕಲಾವಿದ. ನಾಲಿಗೆಗೆ ಬಣ್ಣ ಹಚ್ಚಿಕೊಂಡಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸುವಷ್ಟು ಧೈರ್ಯ ಅವರಿಗಿಲ್ಲ. ಯಡಿಯೂರಪ್ಪ, ಬಿಜೆಪಿಯವರ ಒತ್ತಾಸೆಯಿಂದ ಈ ಸಾಹಸಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಪರವಾಗಿರುವ ಹಿಂದುಳಿದವರು, ದಲಿತರ ಮತಗಳನ್ನು ವಿಭಜಿಸುವ ತಂತ್ರ ಇದರಲ್ಲಿ ಅಡಗಿದೆ’ ಎಂದರು.

ಈಶ್ವರಪ್ಪ ಸ್ಪರ್ಧಿಸುವ ಬಗ್ಗೆ ನನಗೆ ಅನುಮಾನ ಇತ್ತು. ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನದವರೆಗೂ ಅವರು ಕಣದಲ್ಲಿ ಇರುವ ಬಗ್ಗೆ ನಂಬಿಕೆ ಇಲ್ಲ. ಆದರೆ, ಈಗ ಸ್ಪರ್ಧಿಸಲೇಬೇಕಿದೆ. ಕಣದಿಂದ ಹಿಂದಕ್ಕೆ ಸರಿದರೆ ಶೇ 40 ಕಮಿಷನ್ ಹಗರಣದಲ್ಲಿ ಐಟಿ-ಇಡಿ ದಾಳಿಗೆ ಒಳಗಾಗಿ ಈಶ್ವರಪ್ಪ ಜೈಲಿಗೆ ಹೋಗಲಿದ್ದಾರೆ’ ಎಂದು ಅವರು ಹೇಳಿದರು. 

‘ಶಿವಮೊಗ್ಗ ಕ್ಷೇತ್ರದಲ್ಲಿ ಬಂಗಾರಪ್ಪ ಅವರ ಸೋಲಿನ ಸೇಡಿಗೆ ಅವರ ಪುತ್ರಿ ಗೀತಾ ಶಿವರಾಜಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರನ್ನು ಮತದಾರರು ಬೆಂಬಲಿಸಲಿದ್ದಾರೆ. ಈಶ್ವರಪ್ಪ-ಬಿಜೆಪಿಯ ತಂತ್ರ ಫಲಿಸುವುದಿಲ್ಲ’ ಎಂದರು.

‘ಈಶ್ವರಪ್ಪ ಹೇಳುವಂತೆ ಗೀತಾ ಅಭ್ಯರ್ಥಿ ಆಗಿರುವುದರ ಹಿಂದೆ ಯಾವುದೇ ಒಳಒಪ್ಪಂದ ಇಲ್ಲ. ದಿಟ್ಟ ಹೋರಾಟಗಾರ ಬಂಗಾರಪ್ಪ ಅವರ ಮಕ್ಕಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಷ್ಟು ದುರ್ಬಲರಲ್ಲ. ಈಶ್ವರಪ್ಪ ಅವರೇ ಡಮ್ಮಿ’ ಎಂದು ಕಿಚಾಯಿಸಿದರು.

ಬಿ.ವೈ.ರಾಘವೇಂದ್ರ ಅವರನ್ನು ಲಿಂಗಾಯತರು ಬೆಂಬಲಿಸಬೇಕು ಎಂದು ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದು ಕಾಂಗ್ರೆಸ್‌ನ ಚುನಾವಣಾ ತಂತ್ರದ ಭಾಗ. ಇದರಿಂದ ಅಹಿಂದ ಮತಗಳು ಕಾಂಗ್ರೆಸ್‌ಗೆ ಹರಿದು ಬರಲಿವೆ. ಗೀತಾ ಶಿವರಾಜಕುಮಾರ್ ಗೆಲುವು ನಿಶ್ಚಿತ’ ಎಂದರು.

‘ಬಾಯಿ ಬಡುಕತನ ಬಿಟ್ಟರೆ ಹಿಂದುತ್ವಕ್ಕೆ ಈಶ್ವರಪ್ಪ ಕೊಡುಗೆ ಏನೂ ಇಲ್ಲ. ಹೆಚ್ಚೆಂದರೆ ಹೋಮ ಹವನ ಮಾಡಿರಬಹುದು. ಹಿಂದುತ್ವದ ಹೆಸರಿನಲ್ಲಿ ಮತ ಕೇಳುವುದೇ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ. ಅವರ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಲಿ’ ಎಂದು ಆಯನೂರು ಮಂಜುನಾಥ್ ಆಗ್ರಹಿಸಿದರು. ‘ಮಠಾಧೀಶರನ್ನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿಸಿಕೊಳ್ಳುವುದು ಅಪರಾಧ. ಆ ಕೆಲಸವನ್ನು ಕೆ.ಎಸ್.ಈಶ್ವರಪ್ಪ ಬಿ.ವೈ.ರಾಘವೇಂದ್ರ ಮಾಡುತ್ತಿದ್ದಾರೆ. ಅದರಿಂದ ಸ್ವಾಮೀಜಿಗಳ ವಿರುದ್ಧವೂ ಚುನಾವಣಾ ಆಯೋಗ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ’ ಎಂದರು.

Leave a Reply

Your email address will not be published. Required fields are marked *