IPL ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಕೋಟ್ಯಾಂತರ ರೂ ಕಳೆದುಕೊಂಡ ಪತಿ – ಸಾಲಗಾರರ ಕಾಟಕ್ಕೆ ಪತ್ನಿ ಆತ್ಮಹತ್ಯೆ

IPL ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಕೋಟ್ಯಾಂತರ ರೂ ಕಳೆದುಕೊಂಡ ಪತಿ – ಸಾಲಗಾರರ ಕಾಟಕ್ಕೆ ಪತ್ನಿ ಆತ್ಮಹತ್ಯೆ


ಐಪಿಎಲ್‌ IPL ಕ್ರಿಕೆಟ್‌ ಬೆಟ್ಟಿಂಗ್ ಗೀಳಿಗೆ ಬಿದ್ದ ಪತಿ ಬರೋಬ್ಬರಿ 1.5 ಕೋಟಿ ರೂ. ಸಾಲ ಮಾಡಿಕೊಂಡಿದ್ದ. ಇತ್ತ ಸಾಲ ಕೊಟ್ಟವವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. 

ಕಳೆದ ಮಾ.20ರಂದು ಚಿತ್ರದುರ್ಗ ನಗರದ ಹೊಳಲ್ಕೆರೆ ನಗರದ ಬಸವ ಲೇಔಟ್ ನಿವಾಸಿ ರಂಜಿತಾ (23) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪತ್ನಿ ಸಾವಿಗೆ ಸಾಲಗಾರರೆ ಕಾರಣ ಎಂದು ರಂಜಿತಾ ಪತಿ ದರ್ಶನ್ ಆರೋಪಿಸಿದ್ದಾರೆ.

ದರ್ಶನ್ ಹಾಗೂ ರಂಜಿತಾ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗುವು ಇದೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ದರ್ಶನ್‌, ಕ್ರಿಕೆಟ್‌ ಬೆಟ್ಟಿಂಗ್ ವ್ಯಾಮೋಹಕ್ಕೆ ಬಿದ್ದು ಬರೋಬ್ಬರಿ 1.5 ಕೋಟಿ ಹಣ ಕಳೆದುಕೊಂಡಿದ್ದ. ಇತ್ತ ದಿನನಿತ್ಯ ಹಣ ನೀಡುವಂತೆ ಸಾಲಗಾರರು ಮನೆಗೆ ಬರುತ್ತಿದ್ದರು. ಹಣಕ್ಕಾಗಿ ಮನೆ ಹತ್ತಿರ ಬಂದು ದಂಪತಿಗೆ ಕಿರುಕುಳ ನೀಡುತ್ತಿದ್ದರು ಎಂದು ಡೆತ್‌ ನೋಟ್‌ನಲ್ಲಿ ರಂಜಿತಾ ಉಲ್ಲೇಖಿಸಿದ್ದಾರೆ.

ಸದ್ಯ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ರಂಜಿತಾ ತಂದೆ ವೆಂಕಟೇಶ್ ಅವರು ಅಳಿಯ ದರ್ಶನ್‌ಗೆ ಕಾನೂನು ಬಾಹಿರವಾಗಿ ಸಾಲ ನೀಡಿದ್ದ 13 ಮಂದಿ ವಿರುದ್ಧ ದೂರು ನೀಡಿದ್ದಾರೆ. ವೆಂಕಟೇಶ್ ಕೊಟ್ಟ ದೂರಿನ ಆಧಾರದ ಮೇಲೆ ಐಪಿಸಿ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಶಿವು, ಗಿರೀಶ್,ವೆಂಕಟೇಶ್ ಎಂಬುವವರುನ್ನು ಬಂಧಿಸಲಾಗಿದೆ. ಇನ್ನುಳಿದವರು ತಲೆಮರೆಸಿಕೊಂಡಿದ್ದು, ಹೊಳಲ್ಕೆರೆ ಪೊಲೀಸರು ಶೋಧ ನಡೆಸಿದ್ದಾರೆ.

ಅಳಿಯನಿಗೆ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಲು ಇಷ್ಟವಿರಲಿಲ್ಲ. ಆದರೆ ಕೆಲವು ವ್ಯಕ್ತಿಗಳು ಶ್ರೀಮಂತರಾಗಲು ಇದು ಸುಲಭ ಮಾರ್ಗ ಎಂದೇಳಿ ಬಲವಂತವಾಗಿ ಬೆಟ್ಟಿಂಗ್ ಚಟುವಟಿಕೆಗಳಿಗೆ ಹಣ ನೀಡಿದ್ದಾರೆ ಎಂದು ರಂಜಿತಾ ತಂದೆ ವೆಂಕಟೇಶ್‌ ಮಾಹಿತಿ ನೀಡಿದ್ದಾರೆ.

ದರ್ಶನ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ 1.5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಆದರೆ ಆತ ಮಾಡಿದ್ದ ಸಾಲಕ್ಕಿಂತ ಹೆಚ್ಚಿನ ಹಣವನ್ನು ಮರುಪಾವತಿ ಮಾಡಿದ್ದಾರೆ. 2021 ಮತ್ತು 2023ರಲ್ಲಿ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್‌ ಕಟ್ಟಿ ದರ್ಶನ್‌ ಎಲ್ಲವನ್ನೂ ಕಳೆದುಕೊಂಡಿದ್ದರು. ಇತ್ತ ಸಾಲಗಾರರು ಹಣವನ್ನು ತಕ್ಷಣ ಹಿಂದಿರುಗಿಸುವಂತೆ ಒತ್ತಾಯಿಸಿದ್ದರು ಎಂದಿದ್ದಾರೆ.

Leave a Reply

Your email address will not be published. Required fields are marked *