ಗಣಪತಿ ವಿಸರ್ಜನೆ ವೇಳೆ ಡೋಲು ಬಾರಿಸುವ ವಿಚಾರದಲ್ಲಿ ಗಲಾಟೆ – 30 ಮಂದಿ ಪೊಲೀಸ್ ವಶಕ್ಕೆ
ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವತ್ತಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ನಲ್ಲಿ ಶನಿವಾರ ಸಂಜೆ ಗಣಪತಿ ವಿಸರ್ಜನೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.
ಹೊಳೆಹೊನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 30ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಎರಡು ಪ್ರಕರಣ ದಾಖಲಾಗಿವೆ. ಮುಂಜಾಗ್ರತೆ ಕ್ರಮವಾಗಿ ಅರಬಿಳಚಿ ಕ್ಯಾಂಪ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 2 ಕೆ.ಎಸ್.ಆರ್.ಪಿ. ತುಕಡಿಗಳನ್ನು ನಿಯೋಜಿಸಲಾಗಿದೆ.
ಘಟನೆಯಲ್ಲಿ ಇಬ್ಬರು ಪೊಲೀಸ್ ಕಾನ್ಸ್ ಟೆಬಲ್‌ಗಳು ಸೇರಿದಂತೆ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಣೇಶ ಹಬ್ಬಕ್ಕಾಗಿ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯು ವಾಗ ಅರಬಿಳಚಿ ಕ್ಯಾಂಪ್ ಗ್ರಾಮದ ಬಳಿ ಡೋಲು ಬಾರಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ.
ಇದು ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗದೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಹೆಚ್ಚಿನ ಪಡೆಗಳು ಸ್ಥಳಕ್ಕೆ ದಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಭದ್ರಾವತಿ ಡಿವೈಎಸ್‌ಪಿ ಸೇರಿದಂತೆ ಹಲವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಗ್ರಾಮದಲ್ಲಿ ಎರಡು ಸಂಘಟನೆಗಳು ಗಣೇಶ ಪ್ರತಿಷ್ಠಾಪನೆ ಮಾಡಿದ್ದವು. ಆದರೆ, ಡೋಲು ಬಾರಿಸಲು ಒಂದೇ ತಂಡಕ್ಕೆ ಎರಡೂ ಸಂಘಟನೆಗಳು ಒಪ್ಪಂದ ಮಾಡಿಕೊಂಡಿದ್ದವು. ಮೊದಲು ನಮ ಮೆರವಣಿಗೆಗೆ ಬರಬೇಕು ಎಂದು ಎರಡೂ ಸಂಘಟನೆಗಳು ಪಟ್ಟು ಹಿಡಿದಾಗ ವಿವಾದ ಸೃಷ್ಟಿಯಾಯಿತು.
ಒಬ್ಬರು ಮಾತ್ರ ಡೋಲು ಬಾರಿಸುವಂತೆ ಪೊಲೀಸರು ಸೂಚನೆ ನೀಡಿದ್ದರು. ಆದರೆ, ಅದನ್ನು ಉಲ್ಲಂಘಿಸಿ ಪ್ರತಿಷ್ಠೆಗಾಗಿ ಎರಡೂ ಸಂಘಟನೆಗಳೂ ಡೋಲು ಬಾರಿಸಿದ್ದು ಅಶಾಂತಿಗೆ ಕಾರಣವಾಯಿತು ಎಂದು ಶಿವಮೊಗ್ಗ ಎಸ್‌ಪಿ ಮಿಥುನ್‌ಕುಮಾರ್ ತಿಳಿಸಿದ್ದಾರೆ.ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಯಾವುದೇ ಅನಾಹುತ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗಾಯಗೊಂಡಿರುವ ಪೊಲೀಸ್ ಕಾನ್ಸ್ ಟೆಬಲ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ನಡುವೆ ಗುಂಪಿನ ಹಲವು ಸದಸ್ಯರು ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದೆ. ಹೊಳೆಹೊನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.