Headlines

ಸರ್ಕಾರಿ ಕಾರ್ಯಕ್ರಮದಲ್ಲಿ ಹಾರ,ಹಣ್ಣು ನಿಷೇದ : ಸರ್ಕಾರದ ಆದೇಶಕ್ಕೆ ಶಾಸಕ ಹರತಾಳು ಹಾಲಪ್ಪ ಆಕ್ರೋಶ

ಸಾಗರ: ಇನ್ನು ಮುಂದೆ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಗಣ್ಯರಿಗೆ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದನ್ನು ಸದನದಲ್ಲಿ ಪ್ರಶ್ನಿಸಲಿದ್ದೇನೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ  ಘೋಷಿಸಿದರು.

ಇಲ್ಲಿನ ದೇವರಾಜ ಅರಸು ಸಭಾಭವನದಲ್ಲಿ ಭಾನುವಾರ ತಾಲೂಕಿನಲ್ಲಿ ಈವರೆಗೆ 1 ಲಕ್ಷ ಕೋವಿಡ್ ನಿರ್ಬಂಧಕ ಲಸಿಕೆ ನೀಡಿದ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರದ ಸ್ವಯಂ ಸೇವಕರು ಹಾಗೂ ಆರೋಗ್ಯ ಇಲಾಖೆಯ ನೌಕರರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಯಾರೋ ಒಬ್ಬರು ನನಗೆ ಸಮಾರಂಭಗಳಲ್ಲಿ ಹಾರ,ಶಾಲು ಬೇಡ ಎಂದಿದ್ದನ್ನು ಮಾಧ್ಯಮದವರು ಶಹಭಾಷ್‌ಗಿರಿ ಕೊಟ್ಟು ಪ್ರಕಟಿಸಿದ್ದನ್ನೇ ಆಧಾರವಾಗಿಟ್ಟುಕೊಂಡು ಸರ್ಕಾರ ಹಾರ, ಹಣ್ಣು ಬೇಡ ಎಂದು ಆದೇಶ ಹೊರಡಿಸುತ್ತದೆ. ಇವೆಲ್ಲ ಕೀಳು ಪ್ರಚಾರದ ಸಾಮಗ್ರಿಯಾಗುತ್ತವೆ. 

ಇಂತಹ ಆದೇಶದಿಂದ ಹೂವು ಬೆಳೆಯುವವ, ಕಟ್ಟುವವ, ಮಾರುವವ… ಹೀಗೆ ಹಲವು ಹಂತದ ಜನರಿಗೆ ಸಂಕಷ್ಟ ಬರಲಿದೆ. ಉಪಯೋಗವಾಗುವ ವಸ್ತುಗಳನ್ನು ಕೊಡುವುದು ಮುಖ್ಯ ಎಂಬುದನ್ನು ಒಪ್ಪಬಹುದು. ಆದರೆ ಅದನ್ನು ನಿರ್ದಿಷ್ಟಪಡಿಸುವ ಕೆಲಸ ಆಗಬಾರದು. ಒಂದು ಹೂವಿನ ಹಾರದ ಹಿಂದೆಯೂ ಹಲವರ ಬದುಕಿದೆ ಎಂಬುದನ್ನು ಮರೆಯಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಹಿಂದೆ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್, ನನಗೆ ಸನ್ಮಾನ ಮಾಡುವುದಿದ್ದರೆ ಉಣ್ಣೆ ಶಾಲು, ಹತ್ತಿ ಶಾಲು ಕೊಡಿ. ರೇಷ್ಮೆ ಶಾಲು, ಹಣ್ಣು, ಹಾರ ಬೇಡ ಎಂದು ಹೇಳುತ್ತಿದ್ದರು. ಅದನ್ನು ಒಟ್ಟು ಮಾಡಿ ಅವರು ಚಳಿಯಿಂದ ನಡುಗುವ ಬಡವರಿಗೆ ವಿತರಿಸುತ್ತಿದ್ದರು.

 ಈಗ ಸಭೆ ಸಮಾರಂಭಗಳಲ್ಲಿ ಹಾರ, ಶಾಲು, ನೆನಪಿನ ಕಾಣಿಕೆ ಕೊಡಬೇಡಿ. ಅದರ ಬದಲು ಪುಸ್ತಕ ಕೊಡಿ ಎಂದು ಹೇಳುವುದು ಕೂಡ ಪ್ರಶ್ನಾರ್ಹ. 

ನಾನೂ ಸಹ ಪುಸ್ತಕ ಪ್ರೇಮಿ. ನಮ್ಮ ಮನೆಯಲ್ಲೂ ಕುವೆಂಪು ಅವರಿಂದ ಹಿಡಿದು ಎಲ್ಲ ಲೇಖಕರ ಪುಸ್ತಕ ಗ್ರಂಥ ಭಂಡಾರದಲ್ಲಿದೆ. ಅತಿ ಹೆಚ್ಚು ಓದುವ ಶಾಸಕರಲ್ಲಿ ನಾನು ಪ್ರಮುಖನಾಗಿದ್ದೇನೆ.ನಾನು ಎಷ್ಟು ಜನ ಪುಸ್ತಕಗಳನ್ನು  ದಿನಾಲು ಓದುತ್ತಾರೆ ಎಂದು ಪ್ರಶ್ನಿಸಬೇಕಾಗುತ್ತದೆ. ನಾನು ಪುಸ್ತಕಗಳ ವಿರೋಧಿಯಲ್ಲ. ಆದರೆ ಉಪಯೋಗವಾಗುವ ವಸ್ತುಗಳನ್ನು ಗೌರವವಾಗಿ ಕೊಡುವುದಕ್ಕೆ ತಡೆ ಒಡ್ಡುವ ಕ್ರಮವೇ ಸರಿಯಲ್ಲ ಎಂದು ಹಾಲಪ್ಪ ಪ್ರತಿಪಾದಿಸಿದರು.

Leave a Reply

Your email address will not be published. Required fields are marked *