ಮನೆ ಕಟ್ಟಲು ಬಡ್ಡಿಗೆ ಸಾಲ ಪಡೆದಿದ್ದ ಮಹಿಳೆ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ | Crime News
ಬಡ್ಡಿಗೆ ಸಾಲ ನೀಡಿದ್ದವರು ಮನೆ ಬಳಿ ಬಂದು ಗಲಾಟೆ ಮಾಡಿದ್ದರಿಂದ ಮನನೊಂದು ಮಹಿಳೆಯೊಬ್ಬರು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ತಾಲೂಕು ಗೋಂದಿ ಚಟ್ನಹಳ್ಳಿಯ ಶೋಭಾ (39) ಮೃತ ಮಹಿಳೆಯಾಗಿದ್ದಾರೆ.
ಗೋಂದಿ ಚಟ್ನಹಳ್ಳಿಯಲ್ಲಿ ಶೋಭಾ, ರಂಗನಾಥ ದಂಪತಿ ನೂತನ ಮನೆ ಕಟ್ಟಿದ್ದರು.ಮನೆ ನಿರ್ಮಾಣಕ್ಕೆ ಬ್ಯಾಂಕ್ ನಲ್ಲಿ ಪಡೆದ ಲೋನ್ ಸಾಕಾಗದೇ ಗ್ರಾಮದ ಆರು ಮಂದಿಯಿಂದ ಶೇ.3ರ ಬಡ್ಡಿಗೆ ಸಾಲ ಪಡೆದಿದ್ದರು.ಆದರೆ ಇತ್ತೀಚೆಗೆ ರಂಗನಾಥ್ ನಡೆಸುತ್ತಿದ್ದ ಪಾನಿಪೂರಿ ವ್ಯಾಪಾರ ಕುಂಠಿತವಾಗಿತ್ತು. ಇದರಿಂದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಬಡ್ಡಿಗೆ ಸಾಲ ಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡಿದ್ದರು.
ಈ ಘಟನೆಯಿಂದ ಮನನೊಂದಿದ್ದ ಶೋಭಾ ಅವರು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.ರಂಗನಾಥ್ ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳಿದಾಗ ಶೋಭಾ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ.
ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.