ರಿಪ್ಪನ್‌ಪೇಟೆಯ ಮಲ್ಲಾಪುರದಲ್ಲಿ ಕಾಡುಕೋಣಗಳ ಹಿಂಡು ಪ್ರತ್ಯಕ್ಷ ..!!
ರಿಪ್ಪನ್‌ಪೇಟೆ : ಇಲ್ಲಿನ ಮಲ್ಲಾಪುರ ಗ್ರಾಮದಲ್ಲಿ ಕಾಡುಕೋಣಗಳ ಹಿಂಡು ಪ್ರತ್ಯಕ್ಷಗೊಂಡಿದ್ದು ಸುತ್ತಮುತ್ತಲಿನ ರೈತರನ್ನು ಭಯಭೀತರನ್ನಾಗಿಸಿವೆ.
ಗವಟೂರು ಗ್ರಾಮದ ಮಲ್ಲಾಪುರದ ಎಂ.ವೈ.ನಾಗರಾಜಗೌಡ ಎಂಬುವವರ ಜಮೀನಿನಲ್ಲಿ ಇಂದು ಮುಂಜಾನೆಯಲ್ಲಿ ಕಾಡು ಕೋಣಗಳ ಹಿಂಡು ಪ್ರತ್ಯಕ್ಷವಾಗಿದೆ
ರೈತಾಪಿ ವರ್ಗ ಮುಂಜಾನೆ ತಮ್ಮ ತೋಟ ಮತ್ತು ಗದ್ದೆಗಳಿಗೆ ಹೋಗಿ ಬರುವ ಪದ್ದತಿ. ಆದರೆ ಇಂದು ಮುಂಜಾನೆ ಎಂದಿನಂತೆ ರೈತ ತನ್ನ ತೋಟಕ್ಕೆ ಹೋಗುವ ದಾರಿಯಲ್ಲಿ ದಿಢೀರ್ ಕಾಣಿಸಿಕೊಂಡ ಕಾಡುಕೋಣಗಳ ಹಿಂಡನ್ನು ಕಂಡು ಗಾಬರಿಯಿಂದ ಮನೆಗೆ ವಾಪಾಸ್ ಓಡಿರುವುದಾಗಿ ಮಾಧ್ಯಮದವರಿಗೆ ವಿವರಿಸಿದ್ದಾರೆ.
ಮೊದಲೇ ಕಾಡುಕೋಣಗಳು ಮನುಷ್ಯರನ್ನು ಕಂಡು ಏನು ಮಾಡುತ್ತವೆಯೋ ಎಂಬ ಭಯ. ಇನ್ನೊಂದು ಕಡೆ ಎಲ್ಲ ಸುತ್ತಮುತ್ತಲಿನ ಐಬೆಕ್ಸ್ ಬೇಲಿ ಇದ್ದು ಕೋಣಗಳು ಬೆನ್ನತ್ತಿದರೆ ಎಲ್ಲಿ ಓಡಿ ತಪ್ಪಿಸಿಕೊಳ್ಳುವುದು ಎಂಬ ಚಿಂತೆ. ಇದರಿಂದಾಗಿ ದೂರದಲ್ಲಿ ಕಂಡ ಕಾಡುಕೋಣಗಳ ಗುಂಪು ನೋಡಿ ಮನೆಗೆ ಮರಳಿ ಬಂದು ಅವರು, ಪಟಾಕಿ ಸಿಡಿಸಿ ಜಮೀನಿನಿಂದ ಕಾಡಿನ ಕಡೆಗೆ ಓಡಿಸಲಾಯಿತು ಎಂದು ರೈತ ಎಂ.ವೈ. ನಾಗರಾಜ್ ವಿವರಿಸಿದರು.
ಒಟ್ಟಾರೆಯಾಗಿ ಇರುವ ಅರಣ್ಯವನ್ನು ಬೋಳು ಗುಡ್ಡವನ್ನಾಗಿ ಮಾಡಿರುವ ಕಾರಣ ಕಾಡು ಪ್ರಾಣಿಗಳು ಊರಿಗೆ ಬರುವಂತಾಗಿದೆ. ಕುಕ್ಕಳಲೇ ಗ್ರಾಮದ ಅರಣ್ಯ ಸರ್ವೆ ನಂಬರ್ 13 ಮತ್ತು ಕಂದಾಯ ಇಲಾಖೆಯ ನೂರಾರು ಎಕರೆ ಜಮೀನು ಅರಣ್ಯದಂತೆ ಇದ್ದು ಜಮೀನಲ್ಲಿನ ಮರಗಳು ಮಾನವನ ದುರಾಸೆಯಿಂದಾಗಿ ನೆಲಕ್ಕುರುಳಿದ್ದು ಅರಣ್ಯಾಧಿಕಾರಿಗಳಾಗಲಿ, ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ ಯಾರು ಗಮನಹರಿಸದೇ ಖಾಸಗಿಯರ ಪಾಲಾಗುವಂತಾಗಿದೆ.
ಅರಣ್ಯ ಇಲಾಖೆಯವರು ಜೂನ್, ಜುಲೈ ತಿಂಗಳು ಬಂದರೆ ವನಮಹೋತ್ಸವ ಹೆಸರಿನಲ್ಲಿ ಗಿಡ-ಮರಗಳನ್ನು ಬೆಳೆಸಿ ಪರಿಸರ ಉಳಿಸಿ ಎನ್ನುವ ಘೋಷಣೆಯಲ್ಲಿ ಮಲೆನಾಡಿನ ಅರಣ್ಯ ಸರ್ವನಾಶವಾಗುತ್ತಿದ್ದರೂ ಕೂಡಾ ಗೊತ್ತಿಲ್ಲದವರಂತೆ ಇರುವುದು ಇಂದು ಕಾಡು ಪ್ರಾಣಿಗಳು ನಾಡಿಗೆ ಬರುವಂತಾಗಿದೆ.