ಕಾನೂನು ಕೈಗೆತ್ತಿಕೊಳ್ಳುವವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ಬರಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ ಸಲಹೆ | GKB
ಸಾಗರ : ತಪ್ಪು ಮಾಡಿದವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ಬರಬೇಕು. ರಾಜ್ಯ ಸರ್ಕಾರವನ್ನು ಪದೇಪದೇ ಟೀಕಿಸುವ ಬಿಜೆಪಿಯವರು ಕೇಂದ್ರದಲ್ಲಿರುವ ತಮ್ಮ ನೇತೃತ್ವದ ಪಕ್ಷದ ಮೇಲೆ ಅಂತಹ ಕಾನೂನು ಜಾರಿಗೆ ತರಲು ಒತ್ತಡ ಹೇರಲಿ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದ್ದಾರೆ.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೇರೆಬೇರೆ ಸಂದರ್ಭದಲ್ಲಿ ಗಲಭೆ ಮಾಡಿದಾಗ ಹಿಂದೂ ಮುಸ್ಲೀಂ ಕ್ರಿಶ್ಚಿಯನ್ ಸೇರಿದಂತೆ ಯಾವುದೇ ಧರ್ಮದವನು ಮಾಡಿದ್ದರೂ ಅವನಿಗೆ ಏಕರೂಪದ ಶಿಕ್ಷೆ ನೀಡಬೇಕು. ಅಂತಹ ಕಾನೂನು ತರಲಿ. ನಿಮ್ಮ ಕೈನಲ್ಲಿ ಸಾಧ್ಯವಿಲ್ಲ ಎಂದರೆ ಸರ್ಕಾರ ನಮ್ಮ ಕೈಗೆ ಕೊಡಿ ನಾವು ಅಂತಹ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಯಾರೇ ತಪ್ಪು ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಒಂದೊಮ್ಮೆ ಸಚಿವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ಕೊಡಲಿ. ಬಿಜೆಪಿ ಸರ್ಕಾರ ಇದ್ದಾಗ ಈಶ್ವರಪ್ಪ ಯಾಕೆ ರಾಜಿನಾಮೆ ಕೊಟ್ಟರು. ಸಚಿವ ನಾಗೇಂದ್ರ ಪರ ನಾನು ಮಾತನಾಡುವುದಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರುವ ನಿರೀಕ್ಷೆ ಇದ್ದು, ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆ. ಎಲ್ಲಿಯೂ ಬಿಜೆಪಿ ಬಹುಮತ ಬರುವ ವಾತಾವರಣ ಇರಲಿಲ್ಲ. ಮೋದಿಯವರ ಮುಖದಲ್ಲೂ ಸಹ ಕೇಂದ್ರದಲ್ಲಿ ಮತ್ತೊಮ್ಮೆ ತಮ್ಮದೇ ಸರ್ಕಾರ ಬರುತ್ತದೆ ಎನ್ನುವ ವಿಶ್ವಾಸ ಇರಲಿಲ್ಲ. ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದು ಮೋದಿಯವರು ತಮಗೆ ಹೆಚ್ಚು ಭಾಷಣ ಮಾಡಲು ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಮಾತ್ರ. ಮುಂದಿನ ದಿನಗಳಲ್ಲಿ ಮೂರು ಅಥವಾ ನಾಲ್ಕು ಹಂತದಲ್ಲಿ ಲೋಕಸಭಾ ಚುನಾವಣೆ ಮುಗಿಸುವಂತಾಗಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಅಧ್ಯಕ್ಷ ಐ.ಎನ್.ಸುರೇಶಬಾಬು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಪ್ರಮುಖರಾದ ಉಷಾ ಎನ್., ಸೋಮಶೇಖರ ಲ್ಯಾವಿಗೆರೆ, ಗಣಪತಿ ಮಂಡಗಳಲೆ, ಮಧುಮಾಲತಿ, ಸರಸ್ವತಿ ನಾಗರಾಜ್, ಬಿ.ಎ.ಇಂದೂಧರ ಗೌಡ, ಮಹ್ಮದ್ ಖಾಸಿಂ ಇನ್ನಿತರರು ಹಾಜರಿದ್ದರು.