Ripponpete | ನಾಲಿಗೆಯಂತಾಗಿರುವ 108 ಆಂಬುಲೆನ್ಸ್ ನ ಟಯರ್ , ಎರಡು ವಾರಗಳಿಂದ ಸೇವೆ ಸ್ಥಗಿತ – ರೋಗಿಗಳ ಪರದಾಟ

Ripponpete | ನಾಲಿಗೆಯಂತಾಗಿರುವ 108 ಆಂಬುಲೆನ್ಸ್ ನ ಟಯರ್ , ಎರಡು ವಾರಗಳಿಂದ ಸೇವೆ ಸ್ಥಗಿತ – ರೋಗಿಗಳ ಪರದಾಟ

ರಿಪ್ಪನ್‌ಪೇಟೆ : ಜನಸಾಮಾನ್ಯರಿಗೆ ತುರ್ತುಚಿಕಿತ್ಸೆಗಾಗಿ ಆಪತ್ಕಾಲದಲ್ಲಿ ನೆರವಾಗಬೇಕಿದ್ದ 108 ಆಂಬುಲೆನ್ಸ್‌ ತುರ್ತು ಚಿಕಿತ್ಸಾ ವಾಹನ ಸೇವೆ ಪಟ್ಟಣದಲ್ಲಿ ಅಸಮರ್ಪಕ ನಿರ್ವಹಣೆಯಿಂದ ಅಸ್ತವ್ಯಸ್ತಗೊಂಡಿದೆ.


ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ವಾಹನಗಳ ಸಂಚಾರ ಕಳೆದ ಎರಡು ವಾರಗಳಿಂದಲೂ ಸ್ಥಗಿತಗೊಂಡಿದ್ದು ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಪರದಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ ತುರ್ತು ಸಂದರ್ಭದಲ್ಲಿ ಗರ್ಭಿಣಿಯರು, ಅಪಘಾತಕ್ಕೆ ಒಳಗಾದ ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದೇ ಪರದಾಡುವಂತಾಗಿದೆ. ದುಬಾರಿ ಬಾಡಿಗೆ ಕೊಟ್ಟು ಖಾಸಗಿ ವಾಹನಗಳನ್ನು ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ವಾಹನಗಳ ಎಂಜಿನ್‌ ಸುಸ್ಥಿತಿಯಲ್ಲಿದೆ ಆದರೆ ಅದಕ್ಕೆ ಟೈರ್‌ಗಳೇ ಇಲ್ಲ, ಹಾಗಾಗಿ ವಾಹನವನ್ನು ಎಷ್ಟೋ ದಿನಗಳಿಂದ ಆಸ್ಪತ್ರೆ ಆವರಣದ ಶೆಡ್‌ದಲ್ಲಿಯೇ ನಿಂತಿರುವುದು ಕಂಡುಬಂದಿದೆ. ತುರ್ತು ವಾಹನಗಳ ಸೇವೆಯ ಏಜೆನ್ಸಿ ಪಡೆದಿರುವ ಜಿವಿಕೆಎಂಆರ್ ಸಂಸ್ಥೆ ಗಮನಕ್ಕೆ ಸಮಸ್ಯೆ ಬಂದರೂ ವಾಹನಗಳನ್ನು ಸುಸ್ಥಿತಿಗೆ ತರುವುದಕ್ಕೆ ಪ್ರಯತ್ನಿಸಿಲ್ಲ ಎಂಬುದು ತಿಳಿದುಬಂದಿದೆ.

ಹೆದ್ದಾರಿ ಸೇರಿದಂತೆ ಪ್ರಮುಖ ರಾಜ್ಯ ಹೆದ್ದಾರಿಗಳ ಸಂಪರ್ಕ ಹೊಂದಿರುವ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪದೇಪದೇ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಇಂಥ ಸಂದರ್ಭದಲ್ಲಿ ಸಮೀಪದ ಆಸ್ಪತ್ರೆ, ಹೆಚ್ಚಿನ ಚಿಕಿತ್ಸೆಗಳಿಗೆ ಜಿಲ್ಲಾ ಆಸ್ಪತ್ರೆಗೆ ಗಾಯಾಳು ಅಥವಾ ರೋಗಿಗಳನ್ನು ಕರೆದೊಯ್ಯಬೇಕಾದರೆ 108 ವಾಹನದ ಅಗತ್ಯವಿದೆ. ಆದರೆ ಅಂಥ ಸೇವೆ ಜನರ ಪಾಲಿಗೆ ಇಲ್ಲದಂತಾಗಿದೆ.

ಒಟ್ಟಾರೆಯಾಗಿ ಕೂಡಲೇ ಸಂಬಂಧಿಸಿದ ಇಲಾಖೆಯವರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ತುರ್ತು ಚಿಕಿತ್ಸಾ ವಾಹನವನ್ನು ಸಾರ್ವಜನಿಕರ ಸೇವೆಗೆ ಲಭಿಸುವಂತೆ ಮಾಡಲಿ ಎನ್ನುವುದೇ ಪೋಸ್ಟ್ ಮ್ಯಾನ್ ನ್ಯೂಸ್ ನ ಆಶಯವಾಗಿದೆ.

Leave a Reply

Your email address will not be published. Required fields are marked *