ಸಂಸದ ಬಿ ವೈ ರಾಘವೇಂದ್ರ ರವರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 16 ಲಕ್ಷ ರೂ. ಹಣ ಲಪಟಾಯಿಸಿದ್ದ ಪ್ರಕರಣ ನಡೆದಿದೆ.
ಈ ಬಗ್ಗೆ ಸ್ವತಃ ಬಿ ವೈ ರಾಘವೇಂದ್ರ ರವರೇ ಶಿಕಾರಿಪುರದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಮತ್ತು ಈ ಪ್ರಕರಣವನ್ನು
ಶಿವಮೊಗ್ಗ ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿ ಹಣ ಹಿಂದಿರುಗುಸುವಲ್ಲಿ ಯಶಸ್ವಿಯಾಗಿದ್ದಾರೆ
ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದ ಸಂಸದರ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಹಣ ದಿಢೀರ್ ವರ್ಗಾವಣೆಯಾಗಿತ್ತು. ಆದರೆ ಆ ಖಾತೆಯಿಂದ ಅವರು ಯಾವುದೆ ಹಣ ವರ್ಗಾವಣೆ ಮಾಡಿರಲಿಲ್ಲ. ಹಾಗಾಗಿ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮುಂಬೈನಲ್ಲಿ ಹ್ಯಾಕರ್ ನನ್ನು ಪತ್ತೆ ಹಚ್ಚಿ ಬಂಧಿಸಿದರು.
ಬ್ಯಾಂಕಿಂಗ್ ವ್ಯವಸ್ಥೆ ಡಿಜಿಟಲಿಕರಣಗೊಂಡಿದೆ. ಈ ವೇಳೆ ಗ್ರಾಹಕರು ಅತ್ಯಂತ ಎಚ್ಚರಿಕೆ ವಹಿಸಬೇಕಿದೆ. ಒಟಿಪಿ ನಂಬರ್ ಕುರಿತು ಮುತುವರ್ಜಿಯಿಂದ ಇರಬೇಕು. ವಾಟ್ಸಪ್ ಮೂಲಕ ಅಥವಾ ಮೆಸೇಜ್ ಮೂಲಕ ಒಟಿಪಿ ಕೇಳುತ್ತಾರೆ. ಬ್ಯಾಂಕುಗಳು ಹಾಗೆ ಒಟಿಪಿ ನಂಬರ್ ಕೇಳುವುದಿಲ್ಲ. ಅನುಮಾನ ಬಂದರೆ ನೇರವಾಗಿ ಬ್ಯಾಂಕನ್ನು ಸಂಪರ್ಕಿಸಬೇಕು ಎಂದು ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.