ಹೊಸನಗರ: ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ರೂಂಗಳ ಬೀಗಗಳನ್ನು ತುಂಡರಿಸಿ ಒಳ ನುಗ್ಗಿದ ದುಷ್ಕರ್ಮಿಗಳು ಸುಮಾರು 15ಕ್ಕೂ ಹೆಚ್ಚು ಕಾಲೇಜಿನ ಕಡತಗಳು, ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಮೊದಲಾದ ದಾಖಲೆಗಳಿರುವ 09 ಗಾಡ್ರೇಜ್ ಬೀರುಗಳನ್ನು ಮುರಿದು ಬೀರುವಿನಲ್ಲಿದ್ದ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿ ಗಾಡ್ರೇಜ್ ಬೀರುನಲ್ಲಿದ್ದ ಅಂದಾಜು 20 ಸಾವಿರ ರೂ. ಗಳಷ್ಟು ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ತಡರಾತ್ರಿ 2:45 ರ ಸುಮಾರಿಗೆ ನಡೆದಿದೆ.
ನಿನ್ನೆ ಸಂಜೆಯಿಂದ ಪಟ್ಟಣ ಹಾಗೂ ಸುತ್ತಮುತ್ತ ಗುಡುಗು ಮಿಂಚು ಸಹಿತ ಭಾರಿ ಮಳೆ ಆಗುತ್ತಿದ್ದು ವಿದ್ಯುತ್ ಸಹ ಕೈ ಕೊಟ್ಟಿದ್ದು ಇದೇ ಸಮಯವನ್ನು ಬಳಸಿಕೊಂಡ ದುಷ್ಕರ್ಮಿಗಳು ಈ ಲಾಭ ಪಡೆದಿರಬಹುದು ಎಂದು ಶಂಕಿಸಲಾಗಿದೆ.ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು ಬೆಳಿಗ್ಗೆ ಕಾಲೇಜು ಸಿಬ್ಬಂದಿಗಳು ಕಾಲೇಜಿಗೆ ಬಂದಾಗ ಬೀಗ ಮುರಿದ ಪರಿಸ್ಥಿತಿ ನೋಡಿ ಕಾಲೇಜಿನ ಕಡತಗಳು ಚೆಲ್ಲಾಪಿಲ್ಲಿಯಾಗಿ ಇರುವುದನ್ನು ಕಂಡು ದಂಗಾಗಿ ಕಾಲೇಜಿನ ಪ್ರಾಚಾರ್ಯರಿಗೆ ಹಾಗೂ ಪೊಲೀಸರಿಗೆ ಘಟನೆ ಬಗ್ಗೆ ಅರಿವು ಮೂಡಿಸಿದರು ಎನ್ನಲಾಗಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಕಾಲೇಜಿನ ಆವರಣದಲ್ಲಿ ಸಿಸಿ ಕ್ಯಾಮೆರಾಗಳು ಅಳವಡಿಸಿರುವುದು ದುಷ್ಕರ್ಮಿಗಳ ಶೀಘ್ರ ಪತ್ತೆಗೆ ಸಹಾಯಕವಾಗಿದ್ದು ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿಗಳು ಮಾದಕ ದ್ರವ್ಯ ಚಟಕ್ಕೆ ಬಲಿಯಾಗುತ್ತಿದ್ದು ಕಾರಣ ದುಷ್ಕರ್ಮಿಗಳು ಇದರ ಲಾಭ ಪಡೆದಿರಬಹುದು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಡ್ ಫೌಂಡೇಶನ್ ವತಿಯಿಂದ ಕೋಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರ ಉಚಿತ ವಿತರಣೆ
ಕೋಡೂರು : ಮಂಗಳೂರಿನ ಖ್ಯಾತ ರುದ್ರೋಗ ತಜ್ಞ ಪದ್ಮನಾಭ ಕಾಮತ್ ಇವರ ಕ್ಯಾಡ್ ಫೌಂಡೇಶನ್ ವತಿಯಿಂದ ಉಚಿತವಾಗಿ ನೀಡಲಾದ ಇಸಿಜಿ ಯಂತ್ರವನ್ನು ಇಲ್ಲಿನ ಕೋಡೂರು ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿತರಣೆ ಮಾಡಲಾಯಿತು.
ಇಸಿಜಿ ಯಂತ್ರ ವಿತರಿಸಿ ಮಾತನಾಡಿದ ಕೋಡೂರು ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಗ್ರಾಮೀಣ ಭಾಗದಲ್ಲಿ ಉಚಿತವಾಗಿ ಇಸಿಜಿ ಯಂತ್ರಗಳನ್ನ ನೀಡುವುದರ ಮೂಲಕ ಪ್ರಾರಂಭಿಕ ಹಂತದಲ್ಲಿಯೇ ಹೃದ್ರೋಗದ ಸಮಸ್ಯೆಗಳನ್ನು ಕಂಡುಹಿಡಿದು ಅದನ್ನ ಪರಿಹಾರ ಮಾಡುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕ್ಯಾಡ್ ಟ್ರಸ್ಟ್ ಮಂಗಳೂರು ಇದು ಡಾ. ಪದ್ಮನಾಥ್ ಕಾಮತ್ ಇವರ ನೇತೃತ್ವದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು ಈ ಒಂದು ಸಂಸ್ಥೆಯಿಂದ ಇಸಿಜಿ ಯಂತ್ರಗಳನ್ನ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದು ಜನರು ಅದರ ಸದುಪಯೋಗ ಪಡೆದುಕೊಂಡು ಗ್ರಾಮೀಣ ಭಾಗದ ಆರೋಗ್ಯದ ಸಮಸ್ಯೆಯನ್ನ ನೀಗಿಸುವಲ್ಲಿ ಎಲ್ಲರೂ ಸಹಕಾರಿಯಾಗಬೇಕು ಕ್ಯಾಡ್ ಸಂಸ್ಥೆಯ ವತಿಯಿಂದ ನೀಡಲಾಗುವ ಇಸಿಜಿ ಯಂತ್ರದ ವೈದ್ಯಕೀಯ ನೆರವನ್ನು ಸಹ ಡಾ. ಪದ್ಮನಾಭ ಕಾಮತ್ ಇವರೇ ತಮ್ಮ ವಾಟ್ಸಾಪ್ ಗ್ರೂಪ್ ಮೂಲಕ ಆನ್ಲೈನ್ನಲ್ಲಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡುತ್ತಿದ್ದು ಇದು ಇದು ಗ್ರಾಮೀಣ ಭಾಗದ ಅನೇಕ ಕಡು ಬಡವರಿಗೆ ಆಶಾ ಕಿರಣವಾಗಿದೆ. ಇಸಿಜಿ ಯಂತ್ರದ ಸದುಪಯೋಗ ಕೋಡೂರು ಗ್ರಾಮ ಪಂಚಾಯಿತಿ ಭಾಗದ ಎಲ್ಲಾ ಜನರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಡಾ. ಎವಲಿನ್ ಮಾತನಾಡಿ, ಈ ಯಂತ್ರದ ಸದುಪಯೋಗ ಮಾಡಿಕೊಳ್ಳುವುದಾಗಿ ಭರವಸೆಯನ್ನ ನೀಡಿದರು ಹಾಗೂ ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಯಂತ್ರ ಬಳಕೆಯ ಬಗ್ಗೆ ಮಾರ್ಗದರ್ಶನ ಮಾಡುವುದರ ಮೂಲಕ ಎಲ್ಲಾ ವೇಳೆಯಲ್ಲಿ ಇಸಿಜಿ ಯಂತ್ರ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಇತ್ತೀಚೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿದ ಕೋಡೂರು ಗ್ರಾಪಂ ಸದಸ್ಯರ ನಿಯೋಗಕ್ಕೆ ಈ ಯಂತ್ರವನ್ನು ಡಾ. ಪದ್ಮನಾಭ ಕಾಮತ್ ಉಚಿತವಾಗಿ ವಿತರಿಸಿದ್ದರು. ಈ ವೇಳೆ ವೈದ್ಯರನ್ನು ಗೌರವಿಸಿ ಅಭಿನಂದಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದ, ಇಒ ಪ್ರವೀಣ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಯೋಗೇಂದ್ರಪ್ಪ, ಮಂಜಪ್ಪ, ಉಮೇಶ್, ಪ್ರೀತಿ, ಸವಿತಾ, ಅನ್ನಪೂರ್ಣ, ರೇಖಾ, ಪಿಡಿಒ ನಾಗರಾಜ್, ಆಶಾ ಕಾರ್ಯಕರ್ತೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.