ರಿಪ್ಪನ್ಪೇಟೆ : ಸಹಕಾರ ಸಂಘದಲ್ಲಿ ಮೇವು ಉಂಡು ಜೀರ್ಣಿಸಿಕೊಂಡು ಕಬ್ಬಿಣವನ್ನು ಬಂಗಾರ ಮಾಡಿದ ಮಹಾನುಭಾವರಿಂದ ಸಹಕಾರಿ ಸಂಘಗಳು ಮುಳುಗಿ ಹೋದವು ಎಂಬ ಪರಿಸ್ಥಿತಿ ಉದ್ಬವಿಸಿದಾಗ ಉತ್ತಮ ಆಡಳಿತ ನೀಡಿ ಜಿಲ್ಲಾ ಸಹಕಾರಿ ಬ್ಯಾಂಕ್ ನ್ನು ಪುನಶ್ಚೇತನಗೊಳಿಸಿ ಎತ್ತರಕ್ಕೆ ಏರಿಸುವ ಮೂಲಕ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪನವರು ಜನಮನ್ನಣೆ ಗಳಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿನ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇವರು ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿದ ಬಹುಸೇವಾ ವಾಣಿಜ್ಯ ಸಂಕೀರ್ಣ ಗೋದಾಮುನ ನೆಲ ಅಂತಸ್ತು ಉದ್ಘಾಟಿಸಿ ಮಾತನಾಡಿ, ಆರ್ಥಿಕ ಶೋಷಣಾ ಮುಕ್ತ ಸಹಕಾರ ಸಂಘವನ್ನಾಗಿ ಪರಿವರ್ತಿಸಿ ಸಹಕಾರ ಸಂಘಗಳ ಪ್ರಗತಿಯೊಂದಿಗೆ ರೈತರಿಗೆ ಸಹಕಾರ ನೀಡುವ ಸಂಸ್ಥೆಗಳಾಗಿ ರೈತರ ಏಳಿಗ್ಗೆ ಶ್ರಮಿಸುವಂತಾಗಲೆಂದು ಹೇಳಿದರು.
ಅಡಿಕೆ ಆಮದಿನಿಂದಾಗಿ ಯಾರು ಭಯಪಡುವ ಅಗತ್ಯವಿಲ್ಲ ಎಂದು ರೈತರಿಗೆ ಧೈರ್ಯ ತುಂಬಿದ ಸಚಿವರು ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವುದರೊಂದಿಗೆ ಉತ್ತಮ ಧಾರಣೆ ನಿಗದಿಗೊಳಿಸುವುದರ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದ ಅವರು ರೈತರುಗಳು ಅಡಿಕೆಗೆ ಎಲೆ ಚುಕ್ಕಿ ರೋಗ, ಕೊಳೆ ರೋಗ ಹೀಗೆ ಹತ್ತು ಹಲವು ಬೆಳೆಗೆ ರೋಗದ ಬಾಧೆಯಿಂದಾಗಿ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ತುರ್ತಾಗಿ 8 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು ತಕ್ಷಣ ರೋಗದ ನಿಯಂತ್ರಣಕ್ಕೆ ಔಷಧಿ ಸಿಂಪರಣೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಗೋದಾಮಿನ ದ್ವಿತೀಯ ಅಂತಸ್ತನ್ನು ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸಿ ಮಾತನಾಡಿ, ರೈತರಿಗೆ ಉತ್ತಮ ಸೇವಾ ಸೌಲಭ್ಯವನ್ನು ಕಲ್ಪಿಸಲು ದಕ್ಷತೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಸಂಸ್ಥೆಗಳು ಪ್ರಗತಿ ಹೊಂದಲು ಸಾಧ್ಯವೆಂದು ಹೇಳಿದರು.ಸಹಕಾರ ಸಂಘಗಳಲ್ಲಿ ರಾಜಕೀಯ ತರದೆ ಸದಾ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತಾಗಬೇಕು. ಕೆಲವರು ಸಾಲ- ಸಾಲಕ್ಕಾಗಿ ಸಾಲ – ಸಾಲು ಸಾಲಾಗಿ ಸಾಲ ನೀಡುವುದು ನೋಡಿದ್ದೇನೆ. ಅದರಲ್ಲಿ ಅವರು ಡಾಕ್ಟರೇಟ್ ಸಹ ಪಡೆದಿದ್ದಾರೆಂದು ಲೇವಡಿ ಮಾಡಿ, ರೈತನ ಬಾಳು ಹಸನಾಗಲು ಸಹಕಾರಿ ಬ್ಯಾಂಕ್ಗಳು ಅಗತ್ಯವಾಗಿ ಬೆಳೆಯಬೇಕು ಎಂದರು.
ತಳಲೆ ಪ್ರಾಥಮಿಕ ಕೃಷಿ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಹೆಚ್.ಎಸ್.ದಿನೇಶ್ಗೌಡ ಅಧ್ಯಕ್ಷತೆ ವಹಿಸಿದ್ದರು.ಶಿಲಾಫಲಕವನ್ನು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪಗೌಡ ಅನಾವರಣಗೊಳಿಸಿದರು.
ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಜಿ.ಎನ್.ಸುಧೀರ್,ಎಂ ಎಂ ಪರಮೇಶ್, ಶಿವಮೊಗ್ಗ ಜಿಲ್ಲಾ ಸಂಘಗಳ ಸಹಾಯಕ ನಿಬಂಧಕ ಜಿ.ವಾಸುದೇವ, ಹೊಸನಗರ ತಾಲ್ಲೂಕ್ ಅಭಿವೃದ್ದಿ ಅಧಿಕಾರಿ ವೆಂಕಟಾಚಲಪತಿ, ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವನಿತಾ ಗಂಗಾಧರ, ಗ್ರಾ.ಪಂ ಸದಸ್ಯ ಚೂಡಾಮಣಿ, ನಾಗರತ್ನ ಶ್ಯಾಮು ಇನ್ನಿತರರು ಹಾಜರಿದ್ದರು.
ನೇಹಾ ಕಳಸೆ ಪ್ರಾರ್ಥಿಸಿದರು. ಗಂಗಾಧರ ಸ್ವಾಗತಿಸಿದರು. ವಿ.ಡಿ.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಜಿ.ಬಸಪ್ಪ ವಂದಿಸಿದರು.